ನವದೆಹಲಿ: ಲೋಕಸಭೆ ಲೋಕಸಭೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಆಯ್ಕೆಗೆ ಅಂತಿಮ ಕಸರತ್ತು ಆರಂಭಿಸಿದೆ. ಸುಮಾರು 12 ರಾಜ್ಯಗಳ ಅಂದಾಜು 100 ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಾರ್ಚ್ 7ರಂದು ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯ ಸಭೆ ನಡೆಸಲಿದ್ದಾರೆ.
ಕಾಂಗ್ರೆಸ್ 100 ಅಭ್ಯರ್ಥಿಗಳ ಹೆಸರನ್ನು ಮೊದಲ ಹಂತದಲ್ಲಿ ಪ್ರಕಟಿಸಲಿದೆ. ದೆಹಲಿ, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ, ಕೇರಳ, ಕರ್ನಾಟಕ ಮತ್ತು ತೆಲಂಗಾಣ ಮತ್ತು ಎಲ್ಲ ಈಶಾನ್ಯ ರಾಜ್ಯಗಳಿಗೆ ಸಂಬಂಧಿಸಿದ ಸ್ಕ್ರೀನಿಂಗ್ ಸಮಿತಿಗಳು ಕಳೆದ ವಾರವೇ ಸಂಭಾವ್ಯ ಅಭ್ಯರ್ಥಿಗಳ ಹೆಸರನ್ನು ಶಾರ್ಟ್‌ಲಿಸ್ಟ್ ಮಾಡಿವೆ. ಇದೀಗ ಈ ಹೆಸರುಗಳನ್ನು ಸಿಇಸಿ ಪರಿಶೀಲಿಸಿ, ಅನುಮೋದನೆ ನೀಡಲಿದೆ.
ಕರ್ನಾಟಕದಲ್ಲಿ ಹೊಸ ಮುಖಗಳಿಗೆ ಮಣೆ: ದಕ್ಷಿಣ ಭಾರತದ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷ ಜಯಭೇರಿ ಬಾರಿಸಬೇಕು ಎಂಬ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ವ್ಯಾಪಕ ಸಭೆಗಳನ್ನು ನಡೆಸಿದ್ದಾರೆ. ಈ ಬಾರಿ ಕಾಂಗ್ರೆಸ್ನಿಂದ ಹೊಸ ಮುಖಗಳಿಗೆ ಮಣೆ ಹಾಕಲು ಸಹ ನಿರ್ಧರಿಸಲಾಗಿದೆ. ರಕ್ಷಾ ರಾಮಯ್ಯ, ಜಿ.ಬಿ.ವಿನಯ್ ಕುಮಾರ್, ಪ್ರಿಯಾಂಕಾ ಜಾರಕಿಹೊಳಿ, ಮೃಣಾಲ್ ಹೆಬ್ಬಾಳ್ಕರ್ ಮತ್ತು ಸೌಮ್ಯಾ ರೆಡ್ಡಿ ಸೇರಿದಂತೆ ಹಲವು ಯುವ ಮುಖಗಳ ಹೆಸರನ್ನು ಸ್ಕ್ರೀನಿಂಗ್ ಪ್ಯಾನೆಲ್ ಪ್ರಸ್ತಾಪಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
ರಾಹುಲ್ ಸ್ಪರ್ಧೆ ಎಲ್ಲಿ?:ಕೇರಳದಲ್ಲಿ ಕಾಂಗ್ರೆಸ್ ತನ್ನ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಆದರೆ, ರಾಹುಲ್ ಗಾಂಧಿ ವಯನಾಡು ಕ್ಷೇತ್ರದಿಂದಲೇ ಸ್ಪರ್ಧಿಸುತ್ತಾರೋ ಅಥವಾ ತೆಲಂಗಾಣಕ್ಕೆ ಬರುತ್ತಾರೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ರೇವಂತ್ ರೆಡ್ಡಿ ತಮ್ಮ ರಾಜ್ಯದ ಎಲ್ಲ 17 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಭರವಸೆಯನ್ನು ಹೈಕಮಾಂಡ್‌ಗೆ ನೀಡಿದ್ದಾರೆ.
ಹಿರಿಯ ನಾಯಕರು ಕಣಕ್ಕೆ: ಛತ್ತೀಸ್‌ಗಢದಲ್ಲಿ ಮಾಜಿ ಸಿಎಂ ಭೂಪೇಶ್ ಬಘೇಲ್ ಮತ್ತು ಮಾಜಿ ಡಿಸಿಎಂ ಟಿ.ಎಸ್.ಸಿಂಗ್.ದೇವ್ ಕ್ರಮವಾಗಿ ರಾಜನಂದಗಾಂವ್ ಮತ್ತು ಬಿಲಾಸ್‌ಪುರ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ. ಜೊತೆಗೆ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಬೈಜ್ (ಬಸ್ತಾರ್), ಜ್ಯೋತ್ಸ್ನಾ ಮಹಂತ್ (ಕೊರ್ಬಾ), ತಾಮ್ರಧ್ವಜ್ ಸಾಹು (ದುರ್ಗ್), ವಿಕಾಸ್ ಉಪಾಧಾಯ (ರಾಯ್‌ಪುರ) ಮತ್ತು ಶಿವ ದಹರಿಯಾ ಅವರು ಜಾಂಜ್‌ಗೀರ್-ಚಂಪಾ ಕ್ಷೇತ್ರದಿಂದ ಕಣಕ್ಕೆ ಇಳಿಯುವ ನಿರೀಕ್ಷೆ ಇದೆ.