ನವದೆಹಲಿ:ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಸೇರಿ 39 ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ. ಈ ಬಾರಿ ಕೂಡ ಕೇರಳದ ವಯನಾಡಿನಿಂದ ರಾಹುಲ್ ಗಾಂಧಿ ಸ್ಪರ್ಧಿಸಲಿದ್ದಾರೆ
ಲೋಕಸಭಾ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನೇತೃತ್ವದಲ್ಲಿ ಗುರುವಾರ ಕೇಂದ್ರ ಚುನಾವಣಾ ಸಮಿತಿ (ಸಿಇಸಿ)ಯ ಸಭೆ ನಡೆಸಲಾಗಿತ್ತು. ಇಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ನಾಯಕರಾದ ಪವನ್ ಖೇರಾ, ಅಜಯ್ ಮಾಕೇನ್ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದರು.
ಮೊದಲ ಪಟ್ಟಿಯಲ್ಲಿ ಛತ್ತೀಸ್‌ಗಢದ 6 , ಕರ್ನಾಟಕದ 7, ಕೇರಳದ 16 ಕ್ಷೇತ್ರ, ಲಕ್ಷದ್ವೀಪದ 1, ಮೇಘಾಲಯದ 2 , ನಾಗಾಲ್ಯಾಂಡ್ನ 1 ಕ್ಷೇತ್ರ, ಸಿಕ್ಕಂನ 1, ತೆಲಂಗಾಣದ 4 ಹಾಗೂ ತ್ರಿಪುರದ 1 ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈ 39 ಅಭ್ಯರ್ಥಿಗಳಲ್ಲಿ 15 ಜನ ಸಾಮಾನ್ಯ ವರ್ಗದವರು, ಉಳಿದ 24 ಮಂದಿ ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು. 12 ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಯುವಕರು ಮತ್ತು ಅನುಭವಿಗಳ ಉತ್ತಮ ಮಿಶ್ರಣದ ಪಟ್ಟಿಯಾಗಿದೆ ಎಂದು ವೇಣುಗೋಪಾಲ್ ಮತ್ತು ಮಾಕೇನ್ ತಿಳಿಸಿದರು.