ಭುವನೇಶ್ವರ (ಒಡಿಶಾ):ಚುನಾವಣಾ ಪ್ರಚಾರಕ್ಕೆ ಹಣದ ಕೊರತೆ ಹಿನ್ನೆಲೆ ಒಡಿಶಾ ಕಾಂಗ್ರೆಸ್ನ ಪುರಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಸುಚರಿತಾ ಮೊಹಾಂತಿ ಚುನಾವಣಾ ಕಣದಿಂದ ಹಿಂದೆ ಸರಿದು, ಪಕ್ಷ ನೀಡಿದ ಟಿಕೆಟ್ ಅನ್ನು ವಾಪಸ್ ನೀಡಿದ್ದಾರೆ.
ಈ ಬಗ್ಗೆ ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರಿಗೆ ಇ-ಮೇಲ್ ಮೂಲಕ ಮಾಹಿತಿ ನೀಡಿರುವ ಅವರು, ಚುನಾವಣೆಯಲ್ಲಿ ಸ್ಪರ್ಧಿಸಲು ಬೇಕಾದ ಹಣ ನನ್ನ ಬಳಿ ಇಲ್ಲ. ಪಕ್ಷವೂ ಹಣಕಾಸಿನ ನೆರವು ನೀಡಲಾಗಲ್ಲ ಎಂದಿದೆ. ಹೀಗಾಗಿ ಚುನಾವಣೆಯಿಂದ ಹಿಂದೆ ಸರಿದು ಸಾಮಾನ್ಯ ಕಾರ್ಯಕರ್ತೆಯಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಪಕ್ಷವು ಹಣದ ನೆರವು ನಿರಾಕರಿಸಿದ್ದರಿಂದಾಗಿ ಪುರಿ ಲೋಕಸಭಾ ಕ್ಷೇತ್ರದಲ್ಲಿ ತನ್ನ ಪ್ರಚಾರಕ್ಕೆ ಭಾರೀ ಹೊಡೆತ ಬಿದ್ದಿದೆ. ಪಕ್ಷವು ನನಗೆ ಹಣ ನೀಡಲು ಸಾಧ್ಯವಾಗದ ಕಾರಣ ಟಿಕೆಟ್ ವಾಪಸ್ ನೀಡುತ್ತಿದ್ದೇನೆ. ಜೊತೆಗೆ ವಿಧಾನಸಭೆ ಚುನಾವಣೆಯಲ್ಲಿ ತನ್ನ ಕ್ಷೇತ್ರದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳು ಸ್ವತಃ ಖರ್ಚಿನಿಂದಲೇ ಚುನಾವಣೆ ಎದುರಿಸಬೇಕು ಎಂದು ಎಐಸಿಸಿ ಒಡಿಶಾ ಉಸ್ತುವಾರಿ ಅಜಯ್ ಕುಮಾರ್ ಅವರು ಸೂಚಿಸಿದ್ದಾರೆ. ನಾನು ಪತ್ರಕರ್ತೆಯಾಗಿದ್ದು, 10 ವರ್ಷಗಳ ಹಿಂದಷ್ಟೇ ರಾಜಕೀಯಕ್ಕೆ ಬಂದಿದ್ದೇನೆ. ಚುನಾವಣಾ ಪ್ರಚಾರಕ್ಕೆ ನನ್ನ ಬಳಿ ಇರುವ ಹಣವನ್ನು ವಿನಿಯೋಗಿಸಿದ್ದೇನೆ. ಪ್ರಗತಿಪರ ರಾಜಕೀಯಕ್ಕಾಗಿ ದೇಣಿಗೆ ಸಂಗ್ರಹಿಸಿದರೂ, ಯೋಜಿತ ರೀತಿಯಲ್ಲಿ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.