ಅನಂತಪುರ (ಆಂಧ್ರಪ್ರದೇಶ):ಕರ್ನಾಟಕ, ತೆಲಂಗಾಣದಲ್ಲಿ 'ಗ್ಯಾರಂಟಿ'ಗಳನ್ನು ಘೋಷಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್, ಈಗ ಆಂಧ್ರಪ್ರದೇಶದ ವಿಧಾನಸಭೆ ಚುನಾವಣೆಯಲ್ಲೂ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿದೆ. ಬಡ ಕುಟುಂಬದ ಮಹಿಳೆಗೆ ಮಾಸಿಕವಾಗಿ 5 ಸಾವಿರ ರೂಪಾಯಿ ನೀಡುವುದಾಗಿ ಮೊದಲ ಭರವಸೆ ನೀಡಿದೆ.
ಇಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮುಂಬರುವ ವಿಧಾನಸಭೆ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ, ಪ್ರತಿ ತಿಂಗಳು ಕುಟುಂಬದ ಮಹಿಳೆಗೆ 5 ಸಾವಿರ ರೂಪಾಯಿ ನೀಡಲಾಗುವುದು. ಇದು ಮೋದಿ ಗ್ಯಾರಂಟಿಯಂತಲ್ಲ, ಕಾಂಗ್ರೆಸ್ ನೀಡುತ್ತಿರುವ ಪಕ್ಕಾ ಭರವಸೆ ಎಂದು ಹೇಳಿದರು.
'ಇಂದಿರಮ್ಮ ಸಾರ್ವತ್ರಿಕ ಮೂಲ ಆದಾಯ' ಯೋಜನೆಯಡಿ ಹಣವನ್ನು ನೇರವಾಗಿ ಕುಟುಂಬದ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ರಾಯಲಸೀಮಾ, ಉತ್ತರ ಆಂಧ್ರಪ್ರದೇಶದ ಅಭಿವೃದ್ಧಿಗಾಗಿ ವಿಶೇಷ ಅನುದಾನದ ಪ್ಯಾಕೇಜ್ ಘೋಷಿಸಲಾಗುವುದು. ದುಗರಾಜಪಟ್ಟಣಂ ಬಂದರು ಮತ್ತು ಕಡಪದಲ್ಲಿ ಉಕ್ಕು ಕಾರ್ಖಾನೆಯನ್ನು ನಿರ್ಮಿಸುವುದಾಗಿಯೂ ಮಲ್ಲಿಕಾರ್ಜುನ ಖರ್ಗೆ ಭರವಸೆ ನೀಡಿದರು.
ಪ್ರಧಾನಿ ಮೋದಿ ವಿರುದ್ಧ ಕಿಡಿ:ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿದ ಖರ್ಗೆ ಅವರು, 2 ಕೋಟಿ ಉದ್ಯೋಗ, ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂಪಾಯಿ ಜಮೆ, ರೈತರ ಆದಾಯ ದ್ವಿಗುಣಗೊಳಿಸುವ ಮತ್ತು ಇತರ ಭರವಸೆಗಳನ್ನು ನೀಡಿದ ಪ್ರಧಾನಿ ಮೋದಿ ಅವರು ಯಾವುದನ್ನೂ ಈಡೇರಿಸಿಲ್ಲ. ಆದರೆ, ಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಿದೆ ಎಂದು ಹೇಳಿದರು.