ನವದೆಹಲಿ:ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟವು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾರ್ಚ್ 31ರಂದು ಬೃಹತ್ ಸಮಾವೇಶ ಆಯೋಜಿಸಿದೆ. 'ಸಂವಿಧಾನ ಉಳಿಸಿ' ಎಂಬ ಹೆಸರಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಪ್ರತಿಪಕ್ಷಗಳು ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿವೆ.
ಮುಂಬೈನಲ್ಲಿ ಮಾರ್ಚ್ 17ರಂದು ನಡೆದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ನ್ಯಾಯ ಜೋಡೋ ಯಾತ್ರೆಯ ಸಮಾರೋಪ ಕಾರ್ಯಕ್ರಮದಲ್ಲಿ 'ಇಂಡಿಯಾ' ಮೈತ್ರಿಕೂಟದ ನಾಯಕರು ಪಾಲ್ಗೊಂಡು ಒಗ್ಗಟ್ಟು ಪ್ರದರ್ಶಿಸಿದ್ದರು. ಇದೀಗ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬಂಧನ ಬೆನ್ನಲ್ಲೇ ದೆಹಲಿಯಲ್ಲಿ ಒಟ್ಟಾಗಿ ಸಮಾವೇಶ ಆಯೋಜಿಸಿವೆ. ಕೇಜ್ರಿವಾಲ್ ಬಂಧನದ ಖಂಡಿಸಿ ಈ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಆಪ್ ಪಕ್ಷ ಹೇಳಿದೆ.
ಇಂದು ಕಾಂಗ್ರೆಸ್, ನಾಳಿನ ಸಮಾವೇಶ ಒಬ್ಬ ವ್ಯಕ್ತಿಗೆ ಸಂಬಂಧಿಸಿಲ್ಲ. ಆದರೆ, ಇದು 'ಸಂವಿಧಾನ ಉಳಿಸಿ' ಹೆಸರಿನ ಸಮಾವೇಶವಾಗಿದೆ. ಜೊತೆಗೆ ಇದು ಒಂದು ಪಕ್ಷದ ಸಮಾವೇಶವೂ ಅಲ್ಲ. ಇಡೀ 'ಇಂಡಿಯಾ' ಮೈತ್ರಿಕೂಟದ 27 - 28 ಪಕ್ಷಗಳು ಕೂಡ ಭಾಗವಹಿಸುತ್ತಿವೆ ಎಂದು ತಿಳಿಸಿದೆ. ದೇಶದ ಸಂವಿಧಾನ ರಕ್ಷಣೆಯ ಜೊತೆಗೆ ಬೆಲೆ ಏರಿಕೆ, ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ, ಚುನಾವಣಾ ಬಾಂಡ್‌ಗಳ ಭ್ರಷ್ಟಾಚಾರ, ವಿಪಕ್ಷದ ನಾಯಕರನ್ನು ಹಣಿಯಲು ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ಅಂಶಗಳನ್ನು ಮುಂದಿಟ್ಟುಕೊಂಡು ಈ ಸಮಾವೇಶ ನಡೆಯಲಿದೆ. ಬಿಜೆಪಿಯು ಸಂವಿಧಾನವನ್ನು ಬದಲಾಯಿಸುವ ಅಗತ್ಯವಿದೆ ಬಿಜೆಪಿ ಹೇಳುತ್ತಿದೆ. ಹೀಗಾಗಿ ಸಂವಿಧಾನಕ್ಕೆ ಬೆದರಿಕೆ ಇರುವ ಅಂಶವೂ ಮುಖ್ಯವಾಗಿದೆ ಎಂದು ಎಐಸಿಸಿ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದರು.
ಇದೇ ವೇಳೆ, ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳಿಗೆ ಮುಟ್ಟುಗೋಲು ಮತ್ತು ಸುಮಾರು 1,800 ಕೋಟಿ ರೂ. ಕುರಿತು ತೆರಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಈ ವಿಷಯಯೂ ಸಮಾವೇಶದ ಅಂಶವಾಗಲಿದೆ. ಈ ಬಗ್ಗೆ ಜೈರಾಮ್ ರಮೇಶ್ ಪ್ರತಿಕ್ರಿಯಿಸಿ, ಮಾರ್ಚ್ 29ರಂದು ನಮಗೆ ಇನ್ನೂ ಎರಡು ಐಟಿ ಇಲಾಖೆ ನೋಟಿಸ್ಗಳು ಬಂದಿವೆ. ಅದಕ್ಕೂ ಮೊದಲು ನಾವು ಅಂತಹ ನಾಲ್ಕು ನೋಟಿಸ್‌ಗಳನ್ನು ಸ್ವೀಕರಿಸಿದ್ದೇವೆ. ಈಗ ದಿನಕ್ಕೊಂದು ನೋಟಿಸ್ ಬರದಿದ್ದರೆ, ಯಾಕೆ ಬರಲಿಲ್ಲ ಎಂದು ತಲೆ ಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುಶಃ ಭಾನುವಾರ ಬೆಳಗ್ಗೆಯೂ ನಮಗೆ ನೋಟಿಸ್ ಬರಬಹುದು ಎಂದು ಹೇಳಿದರು.