ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಪಕ್ಷಗಳ ನಡುವೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಅವರ ಶ್ರೀನಗರದಲ್ಲಿರುವ ನಿವಾಸಕ್ಕೆ ಭೇಟಿ ನೀಡಿ ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿದರು. ಉಭಯ ನಾಯಕರ ನಡುವಿನ ಮಾತುಕತೆಯಲ್ಲಿ ಸೀಟು ಹಂಚಿಕೆ, ಬಿಜೆಪಿ ವಿರುದ್ಧ ಹೋರಾಟ ಸೇರಿದಂತೆ ಚುನಾವಣಾ ಪೂರ್ವ ಮೈತ್ರಿಗೆ ಅಂತಿಮ ಮುದ್ರೆ ಒತ್ತಲಾಗಿದೆ.
ಕಾಂಗ್ರೆಸ್ ನಾಯಕರ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್‌ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, "ನ್ಯಾಷನಲ್ ಕಾನ್ಫ್ರೆನ್ಸ್ ಮತ್ತು ಕಾಂಗ್ರೆಸ್ ನಡುವಿನ ಚುನಾವಣಾ ಪೂರ್ವ ಮೈತ್ರಿ ನಿಕ್ಕಿಯಾಗಿದೆ. ಎಲ್ಲಾ 90 ಸ್ಥಾನಗಳಲ್ಲಿ ಎರಡು ಪಕ್ಷಗಳು ಸ್ಪರ್ಧೆ ಮಾಡಲಿವೆ. ಮತದಾರರು ನಮ್ಮೊಂದಿಗಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ವಿಭಜಕ ಮನಸ್ಸುಗಳನ್ನು (ಬಿಜೆಪಿ) ಸೋಲಿಸುತ್ತೇವೆ" ಎಂದು ಹೇಳಿದರು.
ಗಮನಾರ್ಹ ಸಂಗತಿಯೆಂದರೆ, ಸಿಪಿಐ(ಎಂ) ಇಂಡಿಯಾ ಕೂಟದಲ್ಲಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಮೆಹಬೂಬ ಮುಫ್ತಿ ಅವರ ಪಿಡಿಪಿ ಪಕ್ಷವನ್ನು ಕೂಟದಿಂದ ಕೈಬಿಡಲಾಗಿದೆ. ಮೈತ್ರಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಸಂಜೆ ವೇಳೆಗೆ ಬಿಡುಗಡೆ ಮಾಡಲಾಗುವುದು ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.