ನವದೆಹಲಿ:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಮತದಾನೋತ್ತರ ಸಮೀಕ್ಷೆಗಳನ್ನು ಕಾಂಗ್ರೆಸ್ ತಿರಸ್ಕರಿಸಿದೆ. ಇದು 'ಮೋದಿ ಮೀಡಿಯಾಗಳ ಸಮೀಕ್ಷೆ' ಎಂದು ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಶನಿವಾರ ಸಂಜೆ ಪ್ರಕಟವಾದ ಎಕ್ಸಿಟ್ ಪೋಲ್ಗಳು ಸಂಪೂರ್ಣ ಬೋಗಸ್. ಚುನಾವಣೆಯಲ್ಲಿ ಸೋಲುವ ಭೀತಿಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ನಡೆಸಿದ ತಂತ್ರ. ಪ್ರಧಾನಿ ಮೋದಿ ಅವರು ಆಡುತ್ತಿರುವ 'ಮಾನಸಿಕ ಆಟಗಳ' ಭಾಗ ಎಂದು ಅವರು ಹೇಳಿದ್ದಾರೆ.
ದೆಹಲಿಯ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸಂಸದರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದನ್ನು ನಾನು ಚುನಾವಣೋತ್ತರ ಸಮೀಕ್ಷೆ ಎಂದು ಕರೆಯುವುದಿಲ್ಲ. ಇವು ಸಂಪೂರ್ಣ ಮೋದಿ ಮೋಡಿಯಾ ಪೋಲ್ ಆಗಿದೆ. ಇದು ಪ್ರಧಾನಿಯ ಫ್ಯಾಂಟಸಿ ಸಮೀಕ್ಷೆ ಎಂದು ದೂರಿದರು.
I.N.D.I.A ಎಷ್ಟು ಸ್ಥಾನಗಳನ್ನು ಗೆಲ್ಲುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ದಿವಂಗತ ಗಾಯಕ ಸಿಧು ಮೂಸೆವಾಲಾ ಅವರ '295' ಹಾಡನ್ನು ಕೇಳಿದ್ದೀರಾ?. ಹಾಡಿನಲ್ಲಿರುವ ಅಂಕಿಯಾದ 295 ಸೀಟುಗಳನ್ನು ಮೈತ್ರಿ ಗೆಲ್ಲುತ್ತದೆ ಎಂದರು.
100 ದಿನದ ಕಾರ್ಯಸೂಚಿಗೆ ಟೀಕೆ:ಇನ್ನೂ, ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಸರ್ಕಾರದ 100 ದಿನಗಳ ಕಾರ್ಯಸೂಚಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದನ್ನೂ ಟೀಕಿಸಿರುವ ಕಾಂಗ್ರೆಸ್ ನಾಯಕರು, ಇದು ಒತ್ತಡದ ತಂತ್ರ. ಅಧಿಕಾರಶಾಹಿತ್ವವನ್ನು ತೋರಿಸುತ್ತದೆ. ಸೋಲುವ ಭಯದಲ್ಲಿ ಅವರು ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಇವೆಲ್ಲಾ ಮೈಂಡ್ಗೇಮ್ ಅಷ್ಟೇ. ನಾನು ಮತ್ತೆ ಪ್ರಧಾನಿಯಾಗುತ್ತಿದ್ದೇನೆ ಎಂಬುದನ್ನು ಮೋದಿ ತೋರಿಸಿಕೊಳ್ಳುತ್ತಿದ್ದಾರೆ. ಅಧಿಕಾರದ ಹಪಾಹಪಿ ಅವರಲ್ಲಿ ಕಾಣುತ್ತಿದೆ. ಜೂನ್ 4ರಂದು ಮತ ಎಣಿಕೆಯ ದಿನ ಸತ್ಯ ಹೊರಬರಲಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ಅಧಿಕಾರದಿಂದ ನಿರ್ಗಮಿಸುವ ಕಾಲ ಬಂದಿದೆ. ಏನೇ ತಂತ್ರ ಮಾಡಿದರೂ ನಡೆಯಲ್ಲ. ಎಕ್ಸಿಟ್ ಪೋಲ್ ಎಲ್ಲವೂ ಬೋಗಸ್ ಸಮೀಕ್ಷೆ. ಗೃಹ ಸಚಿವ ಅಮಿತ್ ಶಾ ಕೂಡ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಇದೆಲ್ಲವೂ ಮೈಂಡ್ಗೇಮ್ ಎಂದು ಟೀಕಿಸಿದರು.
ಎಕ್ಸಿಟ್ ಪೋಲ್ ಭವಿಷ್ಯವೇನು?:ಮತದಾನೋತ್ತರ ಸಮೀಕ್ಷೆಯಲ್ಲಿ ಹಲವು ಮಾಧ್ಯಮಗಳು ಮತ್ತು ಚುನಾವಣಾ ಏಜೆನ್ಸಿಗಳು ಮತ್ತೆ ಎನ್ಡಿಎಗೆ ಅಧಿಕಾರ ಸಿಗಲಿದೆ ಎಂದು ಭವಿಷ್ಯ ನುಡಿದಿವೆ. ಸರಾಸರಿ ಎನ್ಡಿಎಗೆ 356, I.N.D.I. ಕೂಟಕ್ಕೆ 145, ಇತರ 35 ಸೀಟುಗಳು ಸಿಗಲಿವೆ ಎಂದು ಹೇಳಿವೆ.
ಇದನ್ನೂ ಓದಿ:3ನೇ ಸಲವೂ ಎನ್ಡಿಎ ಅಧಿಕಾರಕ್ಕೆ ಬರುತ್ತೆ: ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳು!, ಅಷ್ಟಕ್ಕೂ NDA 400 ಸ್ಥಾನ ಗೆಲ್ಲುತ್ತಾ? - exit poll