ವಯನಾಡು(ಕೇರಳ):ಕೇರಳದ ವಯನಾಡಿನಿಂದ ಲೋಕಸಭೆ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧೆ ಮಾಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಕ್ಷೇತ್ರದ ಹಲವೆಡೆ ರೋಡ್ ಶೋ ನಡೆಸಿದ ಕೈ ನಾಯಕ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಭಾರತದ ಸಂವಿಧಾನವನ್ನು ನಾಶಪಡಿಸಲು ಮತ್ತು ಬದಲಾಯಿಸಲು ಆರ್ಎಸ್ಎಸ್ ಮತ್ತು ಬಿಜೆಪಿ ಪ್ರಯತ್ನಿಸುತ್ತಿವೆ. ಕಾಂಗ್ರೆಸ್ ಪಕ್ಷ ಮತ್ತು I.N.D.I.A ಒಕ್ಕೂಟ ಸಂವಿಧಾನ ಉಳಿಸಲು ಪ್ರಯತ್ನಿಸುತ್ತಿದೆ. ಅಂಬಾನಿ, ಅದಾನಿ ಸೇರಿದಂತೆ ದೇಶದ ಐದಾರು ಶ್ರೀಮಂತ ಉದ್ಯಮಿಗಳ ಬೆಂಬಲಕ್ಕೆ ಮಾತ್ರ ಅವರು ನಿಂತಿದ್ದಾರೆ ಎಂದು ಆರೋಪಿಸಿದರು.
ನಿಜವಾದ ಸಮಸ್ಯೆ ಮರೆಮಾಚಿದ ಪಿಎಂ:ದೇಶದಲ್ಲಿ ಹಲವಾರು ಸಮಸ್ಯೆಗಳು ತಲೆದೋರಿವೆ. ಯುವಕರಿಗೆ ಉದ್ಯೋಗ, ಆರ್ಥಿಕ ಕುಸಿತ, ಸಾಮಾಜಿಕ ಸಾಮರಸ್ಯದಲ್ಲಿ ಬಿರುಕು ಉಂಟಾಗಿದೆ. ಇದ್ಯಾವುದರ ಬಗ್ಗೆಯೂ ಪ್ರಧಾನಿ ಮೋದಿ ಅವರು ಎಂದೂ ಮಾತನಾಡುವುದಿಲ್ಲ. ಇದರ ಬದಲಿಗೆ ಅವರು ವಿಷಯಾಂತರ ಮಾಡಲು ನೀರಿನಲ್ಲಿ ಪೂಜೆ ಸಲ್ಲಿಸುವುದು, ಒಲಿಂಪಿಕ್ಸ್ನಲ್ಲಿ ಭಾರತದ ಸ್ಪರ್ಧೆ, ಚಂದ್ರನಲ್ಲಿ ಮಾನವ ಇಳಿಸುವಂತಹ ಕಲ್ಪಿತ ವಿಷಯಗಳನ್ನೇ ಹೇಳುತ್ತಾರೆ. ಜನರ ನಿಜವಾದ ಸಮಸ್ಯೆಗಳ ಬಗ್ಗೆ ಅವರಿಗೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಅವರು ಆಪಾದಿಸಿದರು.