ನವದೆಹಲಿ:ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸಂವಿಧಾನ ಬದಲಾವಣೆ ಮಾಡಲಿದೆ ಎಂದು ಆರೋಪಿಸುತ್ತಿರುವ ಕಾಂಗ್ರೆಸ್, 100 ದಿನಗಳ "ಸಂವಿಧಾನ ರಕ್ಷಕ ಅಭಿಯಾನ" ಆರಂಭಿಸಿದೆ. ಇದು ದೇಶಾದ್ಯಂತ ನಡೆಯಲಿದ್ದು, ಸಂವಿಧಾನ ಅಂಗೀಕರಿಸಿದ 75ನೇ ವರ್ಷಾಚರಣೆಯ ನವೆಂಬರ್ 26ರಂದು ದೆಹಲಿಯಲ್ಲಿ ಅಭಿಯಾನ ಸಂಪನ್ನವಾಗಲಿದೆ.
ಕೆಲ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಗುರಿ ಇಟ್ಟುಕೊಂಡು ಎಐಸಿಸಿ ಖಜಾಂಚಿ ಅಜಯ್ ಮಾಕನ್, ದೆಹಲಿ ಕಾಂಗ್ರೆಸ್ ಅಧ್ಯಕ್ಷ ದೇವೆಂದರ್ ಯಾದವ್, ಎಐಸಿಸಿ ಎಸ್‌ಸಿ ಮೋರ್ಚಾ ಅಧ್ಯಕ್ಷ ರಾಜೇಶ್ ಲಿಲೋಥಿಯಾ ಅವರು ಶುಕ್ರವಾರ ಅಭಿಯಾನಕ್ಕೆ ಚಾಲನೆ ನೀಡಿದರು.
ಬಿಜೆಪಿಯಿಂದ ಸಂವಿಧಾನದ ಮೇಲೆ ದಾಳಿ:ಬಳಿಕ ಮಾತನಾಡಿದ ಅಜಯ್ ಮಾಕನ್, ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದಿಂದ ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ. ಚುನಾವಣೆಗೆ ಮುನ್ನ ಸಂವಿಧಾನ ಬದಲಾಯಿಸಲು ಬಯಸಿದ್ದ ಪಕ್ಷ ಅಧಿಕಾರದಲ್ಲಿರುವ ಕಾರಣ ಸಂವಿಧಾನಕ್ಕೆ ಹಲವು ಸವಾಲುಗಳು ಮತ್ತು ಬೆದರಿಕೆಗಳು ಇವೆ. ಹೀಗಾಗಿ, ಅದರ ವಿರುದ್ಧ ಅಭಿಯಾನ ನಡೆಸಲಾಗುತ್ತಿದೆ ಎಂದು ಹೇಳಿದರು.