ನವದೆಹಲಿ: ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ನೀಡಿರುವ 'ಪಿತ್ರಾರ್ಜಿತ ತೆರಿಗೆ' ಕುರಿತ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ. ಇದೇ ವೇಳೆ, ಪಿತ್ರೋಡಾ ಹೇಳಿಕೆ ಕುರಿತು ಜನರಲ್ಲಿ ಭಾವೋದ್ರೇಕಗೊಳಿಸುವುದು, ಈ ಮೂಲಕ ಗಮನ ಬೇರೆಡೆ ಸೆಳೆಯಲು ಪ್ರಧಾನಿ ಮೋದಿ ಪ್ರಯತ್ನಿಸುತ್ತಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟೀಕಿಸಿದ್ದಾರೆ.
ಲೋಕಸಭೆ ಚುನಾವಣೆಯ ಹೊತ್ತಲ್ಲಿ ಸಂಪತ್ತಿನ ಮರುಹಂಚಿಕೆಯ ಬಗ್ಗೆ ಅಮೆರಿಕದಲ್ಲಿ ಈಗಾಗಲೇ ಜಾರಿಯಲ್ಲಿರುವ ಪಿತ್ರಾರ್ಜಿತ ತೆರಿಗೆ ಕಾನೂನಿನ ಬಗ್ಗೆ ಸ್ಯಾಮ್ ಪಿತ್ರೋಡಾ ಉಲ್ಲೇಖಿಸಿದ್ದರು. ಈ ಹೇಳಿಕೆ ಹೊಸ ಚರ್ಚೆಗೆ ಗ್ರಾಸವಾಗಿದೆ. ಇದನ್ನೇ ಮುಂದಿಟ್ಟುಕೊಂಡು ಪ್ರಧಾನಿ ಮೋದಿ ಅವರಿಂದ ಹಿಡಿದು ಬಿಜೆಪಿ ನಾಯಕರು ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ.
ಇದರ ಬೆನ್ನಲ್ಲೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ, ಪಿತ್ರೋಡಾ ಹೇಳಿಕೆಯು ಕಾಂಗ್ರೆಸ್ ಪಕ್ಷದ ನಿಲುವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 'ಪಿತ್ರೋಡಾ ವಿಶ್ವದಾದ್ಯಂತ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ. ಭಾರತದ ಅಭಿವೃದ್ಧಿಗೆ ನಿರಂತರ ಕೊಡುಗೆಗಳನ್ನು ಅವರು ನೀಡಿದ್ದಾರೆ. ಪಿತ್ರೋಡಾ ಬಲವಾಗಿ ಭಾವಿಸುವ ವಿಷಯಗಳ ಬಗ್ಗೆ ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಖಂಡಿತವಾಗಿ ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಗೆ ತನ್ನ ವೈಯಕ್ತಿಕ ಅಭಿಪ್ರಾಯಗಳನ್ನು ಚರ್ಚಿಸಲು, ವ್ಯಕ್ತಪಡಿಸಲು ಮತ್ತು ಸಂವಾದ ಮಾಡಲು ಸ್ವಾತಂತ್ರ್ಯವಿದೆ' ಎಂದು ತಿಳಿಸಿದ್ದಾರೆ.
'ಪಿತ್ರೋಡಾ ಅಭಿಪ್ರಾಯಗಳು ಯಾವಾಗಲೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು ಪ್ರತಿಬಿಂಬಿಸುತ್ತವೆ ಎಂದು ಇದರ ಅರ್ಥವಲ್ಲ' ಎಂದೂ ಅವರು ಹೇಳಿದ್ದಾರೆ.
ಬಿಜೆಪಿಗೇಕೆ ಗಾಬರಿ?-ಪಿತ್ರೋಡಾ:ಮತ್ತೊಂದೆಡೆ, ತಮ್ಮ ಹೇಳಿಕೆಯ ಬಗ್ಗೆ ಪಿತ್ರೋಡಾ ಸಹ ಸ್ಪಷ್ಟನೆ ನೀಡಿದ್ದಾರೆ. ''ಅಮೆರಿಕದಲ್ಲಿನ ಪಿತ್ರಾರ್ಜಿತ ತೆರಿಗೆಯ ಬಗ್ಗೆ ಒಬ್ಬ ವ್ಯಕ್ತಿಯಾಗಿ ನಾನು ಹೇಳಿದ್ದನ್ನು 'ಗೋದಿ' ಮಾಧ್ಯಮಗಳು ತಿರುಚಿರುವುದು ದುರದೃಷ್ಟಕರ. ಕಾಂಗ್ರೆಸ್ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಹರಡುತ್ತಿರುವ ಸುಳ್ಳುಗಳಿಂದ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗಿದೆ. ಮಂಗಲ ಸೂತ್ರ ಮತ್ತು ಚಿನ್ನ ಕಸಿದುಕೊಳ್ಳುವಿಕೆಯ ಕುರಿತಾದ ಮೋದಿ ಹೇಳಿಕೆಗಳು ಅವಾಸ್ತವದಿಂದ ಕೂಡಿವೆ'' ಎಂದು ಪೋಸ್ಟ್ ಮಾಡಿದ್ದಾರೆ.
''ನಾನು ಟಿವಿ ಸಂಭಾಷಣೆಯಲ್ಲಿ ಅಮೆರಿಕದಲ್ಲಿನ ಪಿತ್ರಾರ್ಜಿತ ತೆರಿಗೆಯನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದೇನೆ. ನಾನು ಸತ್ಯ ಸಂಗತಿಯನ್ನು ಉಲ್ಲೇಖಿಸಲು ಸಾಧ್ಯವಿಲ್ಲವೇ?, ಈ ವಿಷಯಗಳನ್ನು ಜನರು ಚರ್ಚಿಸಬೇಕು ಮತ್ತು ಸಂವಾದ ಮಾಡಬೇಕು ಎಂದು ನಾನು ಹೇಳಿದ್ದೆ. ಇದಕ್ಕೂ ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷದ ನೀತಿಗೂ ಸಂಬಂಧವಿಲ್ಲ." ಎಂದಿದ್ದಾರೆ.
ಮೋದಿ-ಶಾ ವಾಗ್ದಾಳಿ:ಛತ್ತೀಸ್‌ಗಢದಲ್ಲಿ ನಡೆದ ತಮ್ಮ ಚುನಾವಣಾ ಭಾಷಣದಲ್ಲಿ ಇಂದು ಪ್ರಧಾನಿ ಮೋದಿ, ಪಿತ್ರೋಡಾ ಹೇಳಿಕೆ ಉಲ್ಲೇಖಿಸಿ ಮತ್ತೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. "ಕಾಂಗ್ರೆಸ್ ಪಕ್ಷದ ಅಪಾಯಕಾರಿ ಉದ್ದೇಶಗಳು ಮತ್ತೊಮ್ಮೆ ಮುನ್ನೆಲೆಗೆ ಬಂದಿವೆ. ಈಗ ಈ ಜನರು ತಮ್ಮ ಹೆತ್ತವರು ಮಕ್ಕಳಿಗೆ ಕೊಡುವ ಆಸ್ತಿಯ ಮೇಲೆ ಪಿತ್ರಾರ್ಜಿತ ತೆರಿಗೆ ವಿಧಿಸುವುದಾಗಿ ಹೇಳುತ್ತಿದ್ದಾರೆ" ಎಂದು ದೂರಿದರು.
ಗೃಹ ಸಚಿವ ಅಮಿತ್ ಶಾ ಕೂಡ ಪಿತ್ರೋಡಾ ಹೇಳಿಕೆಯನ್ನು ಮುಂದಿಟ್ಟುಕೊಂಡು ಟೀಕಿಸಿದ್ದಾರೆ. ''ಸಂಪತ್ತು ಮರುಹಂಚಿಕೆ ಕುರಿತು ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಕಾಂಗ್ರೆಸ್ ನಿಲುವಿನ ತುಷ್ಟೀಕರಣದ ರಾಜಕೀಯ ಬಹಿರಂಗವಾಗಿದೆ. ಅವರು ಬಹುಸಂಖ್ಯಾತರ ಆಸ್ತಿಯನ್ನು ವಶಪಡಿಸಿಕೊಂಡು ಅಲ್ಪಸಂಖ್ಯಾತರಿಗೆ ಹಂಚುವ ಪಕ್ಷದ ಉದ್ದೇಶವನ್ನು ಪುನರುಚ್ಚರಿಸಿದ್ದಾರೆ. ಭಾರತದ ಬಡವರು, ದಲಿತರು, ಯುವಕರು, ಬುಡಕಟ್ಟುಗಳು ಮತ್ತು ಹಿಂದುಳಿದ ವರ್ಗಗಳ ಸಬಲೀಕರಣವು ಕಾಂಗ್ರೆಸ್‌ನ ಅಜೆಂಡಾದಲ್ಲಿ ಎಂದಿಗೂ ಇರಲಿಲ್ಲ ಎಂಬುದನ್ನು ಇದು ಮತ್ತೊಮ್ಮೆ ಬಹಿರಂಗಪಡಿಸಿದೆ'' ಎಂದು ಅಮಿತ್ ಶಾ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ:ಮಹಿಳೆಯರ ಮಾಂಗಲ್ಯ, ಸಂಪತ್ತಿನ ಮೇಲೆ ಕಾಂಗ್ರೆಸ್ ಕಣ್ಣು: ಮೂರನೇ ಸಲ ಪ್ರಧಾನಿ ಮೋದಿ ಆರೋಪ