ಇಂದೋರ್: ಮಧ್ಯಪ್ರದೇಶದ ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಸೋಮವಾರ ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ. ಕ್ಷೇತ್ರದಲ್ಲಿ ಮತದಾನಕ್ಕೆ ಇನ್ನು ಕೇವಲ 15 ದಿನಗಳು ಬಾಕಿ ಇರುವಾಗ ತನ್ನ ಅಭ್ಯರ್ಥಿ ಕಣದಿಂದ ಹಿಂದೆ ಸರಿದಿರುವುದು ಕಾಂಗ್ರೆಸ್ ಪಕ್ಷಕ್ಕೆ ಆಘಾತ ಉಂಟುಮಾಡಿದೆ. ಬಾಮ್ ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಇಂದೋರ್ ಜಿಲ್ಲಾಧಿಕಾರಿ ಆಶಿಶ್ ಸಿಂಗ್ ಖಚಿತಪಡಿಸಿದ್ದಾರೆ.
ಅಕ್ಷಯ್ ಕಾಂತಿ ಬಾಮ್ ಮುಂದಿನ ದಿನಗಳಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರುವ ಸಾಧ್ಯತೆಯಿದೆ. ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯ ಕ್ಯಾಬಿನೆಟ್ ಸಚಿವ ಕೈಲಾಶ್ ವಿಜಯವರ್ಗೀಯ ಎಕ್ಸ್ ಖಾತೆಯಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಇದರಲ್ಲಿ ವಿಜಯವರ್ಗೀಯ ಹಾಗೂ ಬಾಮ್ ಒಂದೇ ಕಾರಿನಲ್ಲಿ ಪ್ರಯಾಣಿಸುತ್ತಿರುವುದು ಕಾಣಿಸುತ್ತದೆ. ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಮೆಂಡೋಲಾ ಕೂಡ ಕಾರಿನಲ್ಲಿ ಅವರೊಂದಿಗೆ ಇರುವುದು ಕಾಣಿಸುತ್ತದೆ. ಮೆಂಡೋಲಾ ಅವರು ವಿಜಯವರ್ಗೀಯ ಅವರ ಆಪ್ತರು.
"ಇಂದೋರ್ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಅಕ್ಷಯ್ ಕಾಂತಿ ಬಾಮ್ ಅವರನ್ನು ಬಿಜೆಪಿಗೆ ಸ್ವಾಗತಿಸುತ್ತೇವೆ" ಎಂದು ವಿಜಯವರ್ಗೀಯ ಹೇಳಿದರು. ಇಂದೋರ್ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಸಂಸದ ಶಂಕರ್ ಲಾಲ್ವಾನಿ (62) ವಿರುದ್ಧ ಹೊಸಬರಾದ ಬಾಮ್ (45) ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇಲ್ಲಿ ಮೇ 13 ರಂದು ಮತದಾನ ನಡೆಯಲಿದೆ.