ನವದೆಹಲಿ:ಆರ್ಥಿಕ ತಜ್ಞ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸ್ಮಾರಕದ ಕುರಿತಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕೆಸರೆರಚಾಟ ಶುರುವಾಗಿದೆ. ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ವಿಧಿವಿಧಾನ ಜರುಗಿದ ದೆಹಲಿಯ ನಿಗಮಬೋಧ್ ಘಾಟ್‌ನಲ್ಲೇ ಮೆಮೋರಿಯಲ್ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ.
ಸ್ಥಳ ನಿಗದಿ ಬಗ್ಗೆ ನಿರ್ಧರಿಸದ ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಟೀಕಿಸಿದ್ದಾರೆ. ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕಾಗಿ ಸರ್ಕಾರ ಮೊದಲೇ ಸ್ಥಳ ನಿಗದಿ ಮಾಡದೆ, ದೇಶದ ಮೊದಲ ಸಿಖ್ ಪ್ರಧಾನಿಗೆ ಅವಮಾನ ಮಾಡಿದೆ. ಇದನ್ನು ಜನರು ಅರಿತುಕೊಳ್ಳಬೇಕು ಎಂದು ಹೇಳಿದ್ದರು.
ಬಿಜೆಪಿ ತಿರುಗೇಟು:ಅಂತ್ಯಕ್ರಿಯೆಗೂ ಮೊದಲು ಸ್ಮಾರಕದ ಬಗ್ಗೆ ವಿವಾದ ಸೃಷ್ಟಿಸಿದ ಕಾಂಗ್ರೆಸ್ಗೆ ಬಿಜೆಪಿ ತಿರುಗೇಟು ನೀಡಿದ್ದು, ಸಿಂಗ್ ಅವರ ಹೆಸರಿನಲ್ಲಿ ಕೊಳಕು ರಾಜಕಾರಣ ಮಾಡಬೇಡಿ. ಮೆಮೋರಿಯಲ್ ನಿರ್ಮಾಣಕ್ಕಾಗಿ ಸರ್ಕಾರ ಶ್ರಮಿಸಲಿದೆ ಎಂದು ಹೇಳಿದೆ.
ಪಿ. ವಿ. ನರಸಿಂಹ ರಾವ್ ಅವರು ಇಹಲೋಕ ತ್ಯಜಿಸಿದ ನಂತರ ಕಾಂಗ್ರೆಸ್ ಹೇಗೆ ನಡೆದುಕೊಂಡಿತು ಎಂಬುದನ್ನು ಮರೆಯಬಾರದು. ಮಾಜಿ ಪ್ರಧಾನಿಯ ಸ್ಮಾರಕ ನಿರ್ಮಾಣ ಮಾಡಲು ಆಸಕ್ತಿ ವಹಿಸಲಿಲ್ಲ. ಈಗ ಸಿಂಗ್ ಅವರ ಹೆಸರಿನಲ್ಲಿ ಕೊಳಕು ರಾಜಕೀಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದೆ.