ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯನ್ನು ಗೆದ್ದೇ ತೀರುವಂತೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್ ಎಲ್ಲ 70 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಖೈರು ಮಾಡಿದೆ. ಬಾಕಿ ಉಳಿಸಿಕೊಂಡಿದ್ದ 2 ಸ್ಥಾನಗಳಿಗೂ ಗುರುವಾರ ಉಮೇದುವಾರರನ್ನು ಪ್ರಕಟಿಸಿತು.
ಇದುವರೆಗೂ 68 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್ ಇಂದು ತಿಮಾರ್ಪುರ ಮತ್ತು ರೋಹ್ತಾಸ್ ನಗರ ಕ್ಷೇತ್ರಗಳಿಗೆ ಇಬ್ಬರನ್ನು ಘೋಷಿಸಿತು. ತಿಮಾರ್ಪುರದಿಂದ ಲೋಕೇಂದ್ರ ಚೌಧರಿ, ಸುರೇಶ್ ವತಿ ಚೌಹಾಣ್ ಅವರನ್ನು ರೋಹ್ತಾಸ್ ನಗರದಿಂದ ಸ್ಪರ್ಧಿಸಲಿದ್ದಾರೆ.
ಬುಧವಾರ 5 ಕ್ಷೇತ್ರಗಳಾದ ಬವಾನಾ (ಎಸ್ಸಿ) ಕ್ಷೇತ್ರದಿಂದ ಸುರೇಂದ್ರಕುಮಾರ್, ರೋಹಿಣಿ ಕ್ಷೇತ್ರದಿಂದ ಸುಮೇಶ್ ಗುಪ್ತಾ, ಕರೋಲ್ಬಾಗ್ (ಎಸ್ಸಿ) ಕ್ಷೇತ್ರದಿಂದ ರಾಹುಲ್ ಧನಕ್, ತುಘಲಕಾಬಾದ್ನಿಂದ ವೀರೇಂದ್ರ ಬಿಧೂರಿ ಮತ್ತು ಬದರ್ಪುರದಿಂದ ಅರ್ಜುನ್ ಭದಾನ ಅವರನ್ನು ಕಣಕ್ಕಿಳಿಸಿತ್ತು.
ಕಾಂಗ್ರೆಸ್ ಮಂಗಳವಾರ 15 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತ್ತು. ಅದರಲ್ಲಿ ಪಟೇಲ್ ನಗರದಿಂದ ಕೇಂದ್ರ ಮಾಜಿ ಸಚಿವ ಕೃಷ್ಣಾ ತೀರತ್, ಓಖ್ಲಾ ಕ್ಷೇತ್ರದಿಂದ ಆರಿಬಾ ಖಾನ್ ಅವರನ್ನು ಕಣಕ್ಕಿಳಿಸಿತ್ತು.
ಸಿಎಂ ಅತಿಶಿ ವಿರುದ್ಧ ಅಲ್ಕಾ ಲಂಬಾ: ಚುನಾವಣಾ ಕಣದಲ್ಲಿ ಕಲ್ಕಾಜಿ ಕ್ಷೇತ್ರವು ಜಿದ್ದಾಜಿದ್ದಿನ ಕ್ಷೇತ್ರವಾಗಿದೆ. ಆಮ್ ಆದ್ಮಿ ಪಕ್ಷದ (ಆಪ್) ಅಭ್ಯರ್ಥಿ, ಸಿಎಂ ಅತಿಶಿ ವಿರುದ್ಧ ಕಾಂಗ್ರೆಸ್ ತನ್ನ ಪಕ್ಷದ ಫೈರ್ಬ್ರ್ಯಾಂಡ್, ಮಾಜಿ ಶಾಸಕಿ ಅಲ್ಕಾ ಲಂಬಾ ಅವರನ್ನು ಕಣಕ್ಕಿಳಿಸಿದೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಮಾಜಿ ಸಂಸದ ಸಂದೀಪ್ ದೀಕ್ಷಿತ್ ಅವರನ್ನು ಎದುರಾಳಿಯಾಗಿ ಕಣಕ್ಕೆ ಇಳಿಸಿದೆ.
ವಿಪಕ್ಷಗಳ I.N.D.I.A. ಕೂಟದ ಎರಡು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಆಪ್ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪರಸ್ಪರ ಪ್ರತಿಸ್ಪರ್ಧಿಗಳಾಗಿವೆ. ಇಲ್ಲಿ ಬಿಜೆಪಿಯೂ ಕಠಿಣ ಸ್ಪರ್ಧೆ ನೀಡಿದ್ದರೂ, ಕಾಂಗ್ರೆಸ್ ಮತ್ತು ಆಪ್ ನಡುವಿನ ಹೋರಾಟ ಗಮನಾರ್ಹವಾಗಿದೆ.
ಫೆಬ್ರವರಿ 5 ರಂದು ದೆಹಲಿ ವಿಧಾನಸಭೆಗ ಮತದಾನ ನಡೆಯಲಿದ್ದು, ಫೆಬ್ರವರಿ 8 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ದೆಹಲಿ ಚುನಾವಣೆ: ಕಾಂಗ್ರೆಸ್ನಿಂದ ಇದೇ ಮೊದಲ ಸಲ 'ಉಚಿತ'ವಲ್ಲದ ಭರವಸೆ ಘೋಷಣೆ
ಓದಿ: ದೆಹಲಿ ಚುನಾವಣೆ: ಬಿಜೆಪಿ ಮೊದಲ ಪಟ್ಟಿ ಬಿಡುಗಡೆ, ಅರವಿಂದ್ ಕೇಜ್ರಿವಾಲ್ ವಿರುದ್ಧ ಮಾಜಿ ಸಂಸದ ಕಣಕ್ಕೆ