ನವದೆಹಲಿ: ಕಾಶ್ಮೀರ ಕಣಿವೆಗೆ ವಂದೇ ಭಾರತ್ ರೈಲು ಸೇವೆಯ ಉದ್ಘಾಟನೆಯನ್ನು ಮುಂದೂಡಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಉಧಂಪುರ, ಶ್ರೀನಗರ ಮತ್ತು ಬಾರಾಮುಲ್ಲಾ ನಡುವಿನ ವಂದೇ ಭಾರತ್ ರೈಲು ಸೇವೆಯನ್ನು ಫೆಬ್ರವರಿ 17 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ ಎಂದು ಈ ಮುಂಚೆ ಅಧಿಕಾರಿಗಳು ತಿಳಿಸಿದ್ದರು. ರೈಲು ಸೇವೆ ಉದ್ಘಾಟನೆಯ ಮುಂದಿನ ದಿನಾಂಕವನ್ನು ಸದ್ಯಕ್ಕೆ ಅಧಿಕಾರಿಗಳು ಖಚಿತಪಡಿಸಿಲ್ಲ.
ಮಹತ್ವಾಕಾಂಕ್ಷೆಯ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್ಬಿಆರ್ಎಲ್) ಮಾರ್ಗವು ಭಾರತೀಯ ರೈಲ್ವೆ ನಿರ್ಮಿಸಿದ ಅತ್ಯಂತ ಸವಾಲಿನ ರೈಲ್ವೆ ಯೋಜನೆಯಾಗಿದೆ. ತಾಂತ್ರಿಕವಾಗಿ ವಿಶ್ವದ ಅತ್ಯಂತ ಸವಾಲಿನ ರೈಲ್ವೆ ಯೋಜನೆಗಳಲ್ಲಿ ಒಂದಾಗಿರುವ ಇದು, ಭಾರತೀಯ ರೈಲ್ವೆ ನಿರ್ಮಿಸಿದ ದೈತ್ಯ ಮೂಲಸೌಕರ್ಯ ಯೋಜನೆಯಾಗಿದೆ.
ಈ ಯೋಜನೆಯು 331 ಮೀಟರ್ ಎತ್ತರದ ಪೈಲಾನ್ ಹೊಂದಿರುವ ದೇಶದ ಮೊದಲ ಕೇಬಲ್-ಸ್ಟೇ ಅಂಜಿ ಖಾಡ್ ಸೇತುವೆಯನ್ನು ಒಳಗೊಂಡಿದೆ. ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ, ಪ್ಯಾರಿಸ್ ನ ಐಫೆಲ್ ಟವರ್ ಗಿಂತ ಎತ್ತರವಾಗಿದೆ ಹಾಗೂ ಚೆನಾಬ್ ರೈಲ್ವೆ ಸೇತುವೆ ನದಿ ಪಾತ್ರದಿಂದ 359 ಮೀಟರ್ ಎತ್ತರದಲ್ಲಿದೆ. ಉಧಂಪುರ ಮತ್ತು ಶ್ರೀನಗರ ನಡುವಿನ ಈ ರೈಲ್ವೆ ಮಾರ್ಗದಲ್ಲಿ ಒಂದು ಡಜನ್ ಗೂ ಹೆಚ್ಚು ಸುರಂಗಗಳಿವೆ.
ಇಲ್ಲಿನ ಹವಾಮಾನ ವೈಪರೀತ್ಯಗಳನ್ನು ಗಮನದಲ್ಲಿರಿಸಿಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಮೈನಸ್ 20 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿಯೂ ಕಾರ್ಯನಿರ್ವಹಿಸಬಲ್ಲದು.
ಈ ರೈಲು ವಿದ್ಯುತ್ ಮಳಿಗೆಗಳನ್ನು ಹೊಂದಿರುವ ಸಂಪೂರ್ಣ ಹವಾನಿಯಂತ್ರಿತ ಬೋಗಿಗಳು, ಓದುವ ದೀಪಗಳು, ಸಿಸಿಟಿವಿ ಕ್ಯಾಮೆರಾಗಳು, ಸ್ವಯಂಚಾಲಿತ ಬಾಗಿಲುಗಳು, ಜೈವಿಕ ನಿರ್ವಾತ ಶೌಚಾಲಯಗಳು, ಸಂವೇದಕ ಆಧಾರಿತ ನೀರಿನ ನಲ್ಲಿಗಳು ಮತ್ತು ಪ್ರಯಾಣಿಕರ ಮಾಹಿತಿ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಬೋಗಿಗಳು ಅಗಲವಾದ ಕಿಟಕಿಗಳನ್ನು ಹೊಂದಿದ್ದು, ರೋಲರ್ ಬ್ಲೈಂಡ್ ಗಳು ಮತ್ತು ಸಾಮಾನುಗಳಿಗಾಗಿ ಓವರ್ ಹೆಡ್ ರ್ಯಾಕ್ ಗಳನ್ನು ಹೊಂದಿವೆ.
ರೈಲಿನ ಚಾಲಕನ ವಿಂಡ್ ಶೀಲ್ಡ್ ಸುಧಾರಿತ ಡಿಫ್ರಾಸ್ಟ್ ವ್ಯವಸ್ಥೆಯನ್ನು ಹೊಂದಿದೆ. ಇದು ತೇವಾಂಶ ಮತ್ತು ಹೆಚ್ಚಿನ ಆರ್ದ್ರ ಹವಾಮಾನ ಪರಿಸ್ಥಿತಿಗಳಲ್ಲಿ ಸ್ಪಷ್ಟ ದೃಷ್ಟಿಗೆ ಅನುವು ಮಾಡಿಕೊಡುತ್ತದೆ. ಉಧಂಪುರ ಮತ್ತು ಬಾರಾಮುಲ್ಲಾ ನಡುವಿನ 150 ಕಿ.ಮೀ ದೂರವನ್ನು ಎರಡೂವರೆ ಗಂಟೆಗಳಲ್ಲಿ ಈ ರೈಲು ಕ್ರಮಿಸಲಿದೆ. ಜಮ್ಮು ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ದಿನಾಂಕವಾದ ಆಗಸ್ಟ್ 15 ರೊಳಗೆ ಕತ್ರಾದಲ್ಲಿ ರೈಲುಗಳ ಆರಂಭಿಕ ವಿನಿಮಯವನ್ನು ಕೈಬಿಡಲಾಗುವುದು.
ಇದನ್ನೂ ಓದಿ : ದೆಹಲಿ ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿದ್ದು ಹೇಗೆ?: ಪ್ರತ್ಯಕ್ಷದರ್ಶಿಗಳ ಮಾತು - DELHI RAILWAY STATION STAMPEDE