ನವದೆಹಲಿ:ಮಾರ್ಚ್ ಮೊದಲ ದಿನವೇ ಗ್ರಾಹಕರಿಗೆ ಬಿಗ್ ಶಾಕ್ ನೀಡಲಾಗಿದೆ. ಸರ್ಕಾರಿ ತೈಲ ಏಜೆನ್ಸಿಗಳು ಇಂದು ಬೆಳಗ್ಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸಿವೆ. 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಲಾಗಿದ್ದು, ಏರಿಕೆಯಾದ ಬೆಲೆಯು ಇಂದಿನಿಂದಲೇ ಅನ್ವಯವಾಗಲಿದೆ.
19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ:19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ದರದಲ್ಲಿ 25.50 ರೂ. ಏರಿಕೆ ಮಾಡಲಾಗಿದೆ. ಆದ್ರೆ, ಗೃಹಬಳಕೆಯ ಸಿಲಿಂಡರ್‌ಗಳ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
2024ರಲ್ಲೇ ಎರಡು ಬಾರಿ ಹೆಚ್ಚಳ: 2024ರಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು ಎರಡು ಬಾರಿ ಹೆಚ್ಚಳ ಮಾಡಲಾಗಿದೆ. ಕಳೆದ ತಿಂಗಳು ಫೆಬ್ರವರಿಯಲ್ಲಿ 14 ರೂ. ಹೆಚ್ಚಳವಾಗಿತ್ತು. ಇದೀಗ ಮಾರ್ಚ್ ತಿಂಗಳ ಮೊದಲ ದಿನವೇ 25.50 ರೂ. ಏರಿಕೆ ಆಗಿದೆ. ಹೊಸ ದರದ ಪ್ರಕಾರ, ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,795 ರೂಪಾಯಿ ಇದೆ. ಮಾಯಾನಗರಿ ಮುಂಬೈನಲ್ಲಿ 1749 ರೂಪಾಯಿಗೆ ಸಿಲಿಂಡರ್ ಲಭ್ಯವಿರುತ್ತದೆ. ಇನ್ನು ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1911 ರೂ. ಇದೆ. ಆದರೆ, ಚೆನ್ನೈನಲ್ಲಿ ಈ ಸಿಲಿಂಡರ್ ಸುಮಾರು 1960.50 ರೂಪಾಯಿಗೆ ಲಭ್ಯವಿದೆ.
ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರಲ್ಲಿ ಬದಲಾವಣೆ ಇಲ್ಲ:ಸರ್ಕಾರಿ ಗ್ಯಾಸ್ ಏಜೆನ್ಸಿಗಳು ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಹೆಚ್ಚಳ ಮಾಡಿಲ್ಲ. ದೆಹಲಿಯಲ್ಲಿ ಗೃಹಬಳಕೆಯ ಸಿಲಿಂಡರ್ ಬೆಲೆ 903 ರೂಪಾಯಿ ಇದೆ. ಆದರೆ, ಕೋಲ್ಕತ್ತಾದಲ್ಲಿ 929 ರೂಪಾಯಿ, ಮುಂಬೈನಲ್ಲಿ ಸುಮಾರು 902.50 ರೂಪಾಯಿ ಹಾಗೂ ಚೆನ್ನೈನಲ್ಲಿ ಗೃಹಬಳಕೆ ಸಿಲಿಂಡರ್ ಬೆಲೆ ಸುಮಾರು 918.50 ರೂಪಾಯಿ ಇದೆ.
ಇದನ್ನೂ ಓದಿ:ಚೆನ್ನೈ: ಸಚಿವಾಯಲಯಕ್ಕೆ ಬಾಂಬ್ ಬೆದರಿಕೆ ಕರೆ, ಬಾಂಬ್ ನಿಷ್ಕ್ರೀಯ ತಂಡದಿಂದ ಶೋಧ