ಶ್ರೀನಗರ(ಜಮ್ಮು- ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರದಲ್ಲಿ ಮೈ ಕೊರೆಯುವ ಚಳಿ ಇದೆ. ತೀವ್ರ ಶೀತಗಾಳಿಯಿಂದಾಗಿ ಕಣಿವೆಯ ಜನರು ಗಡಗಡ ನಡುಗುತ್ತಿದ್ದಾರೆ. ತಾಪಮಾನ ತೀವ್ರ ಪ್ರಮಾಣದಲ್ಲಿ ಕುಸಿಯುತ್ತಿದ್ದು, ಗುಲ್ಮಾರ್ಗ್ನಲ್ಲಿ ಭಾನುವಾರ ರಾತ್ರಿ -9.0 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಿಮಾಲಯ ಪರ್ವತದ ಬುಡದಲ್ಲಿರುವ ಗುಲ್ಮಾರ್ಗ್ನಲ್ಲಿ ಹಿಮಪಾತ ಶುರುವಾಗಿದೆ. ತೀವ್ರ ಮಂಜಿನಿಂದಾಗಿ ಈ ಪ್ರದೇಶವು ಕೇಂದ್ರಾಡಳಿತ ಪ್ರದೇಶದಲ್ಲಿಯೇ ಅತೀ ಶೀತ ಪ್ರದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾರ್ಷಿಕವಾಗಿ ನಡೆಯುವ ಅಮರನಾಥ ಯಾತ್ರೆಯ ಮೂಲ ಶಿಬಿರವಾಗಿ ಕಾರ್ಯನಿರ್ವಹಿಸುವ ಪಹಲ್ಗಾಮ್‌ನಲ್ಲಿ ಕನಿಷ್ಠ ತಾಪಮಾನ ಮೈನಸ್ 6.8 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಶ್ರೀನಗರದಲ್ಲಿ -3.3 ಡಿಗ್ರಿ ಸೆಲ್ಸಿಯಸ್, ಕಾಶ್ಮೀರದ ಹೆಬ್ಬಾಗಿಲು ಎಂದು ಕರೆಸಿಕೊಳ್ಳುವ ಖಾಜಿಗುಂಡ್‌ನಲ್ಲಿ -5.2 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಉತ್ತರ ಕಾಶ್ಮೀರದ ಕುಪ್ವಾರ ಮತ್ತು ದಕ್ಷಿಣ ಕಾಶ್ಮೀರದ ಕೋಕರ್‌ನಾಗ್‌ನಲ್ಲಿ ಕನಿಷ್ಠ ಮೈನಸ್ 4.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಹಿಮಪಾತದ ಮನ್ಸೂಚನೆ:ಚಳಿ ಏರುತ್ತಿರುವ ಕಾರಣ, ಮುಂದಿನ 10 ದಿನ ಕಾಶ್ಮೀರದಲ್ಲಿ ಶುಷ್ಕ ವಾತಾವರಣವಿರಲಿದೆ. ಡಿಸೆಂಬರ್ 12ರಂದು ಕಣಿವೆಯ ಹೆಚ್ಚಿನ ಪ್ರದೇಶಗಳಲ್ಲಿ ಲಘು ಹಿಮಪಾತವಾಗುವ ಸಾಧ್ಯತೆಯಿದೆ. ಶೀತದ ಅಲೆಗೆ ತೀವ್ರವಾಗುತ್ತಿದ್ದು, ಡಿಸೆಂಬರ್ 21ರಿಂದ 40 ದಿನಗಳ ಕಾಲ ಅತ್ಯಂತ ಚಳಿ ಆವರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಋತುವಿನ ಮೊದಲ ಹಿಮಪಾತ: 87 ರಸ್ತೆಗಳು ಬಂದ್, ಸಂಚಾರ ಅಸ್ತವ್ಯಸ್ತ