ಕರ್ನಾಟಕ

karnataka

ETV Bharat / bharat

ದೆಹಲಿಯಲ್ಲಿ ಕೊರೆಯುವ ಚಳಿ: ವಾಯುಮಾಲಿನ್ಯ 'ತೀವ್ರ ಕಳಪೆ' ಮಟ್ಟದಲ್ಲೇ ಮುಂದುವರಿಕೆ - DELHIS AIR QUALITY

ದೆಹಲಿಯಲ್ಲಿನ ವಾಯುಮಾಲಿನ್ಯವು ತೀರಾ ಕಳಪೆ ಮಟ್ಟದಲ್ಲಿ ಮುಂದುವರೆದಿದೆ.

ದೆಹಲಿಯಲ್ಲಿ ಕೊರೆಯುವ ಚಳಿ: ವಾಯುಮಾಲಿನ್ಯ ತೀವ್ರ ಕಳಪೆ ಮಟ್ಟದಲ್ಲೇ ಮುಂದುವರಿಕೆ
ದೆಹಲಿಯಲ್ಲಿ ಕೊರೆಯುವ ಚಳಿ: ವಾಯುಮಾಲಿನ್ಯ ತೀವ್ರ ಕಳಪೆ (IANS)

By ETV Bharat Karnataka Team

Published : Nov 29, 2024, 12:26 PM IST

ನವದೆಹಲಿ: ದೆಹಲಿಯಲ್ಲಿ ಕಳಪೆ ವಾಯುಮಾಲಿನ್ಯದ ಸ್ಥಿತಿ ಮುಂದುವರಿದಿದ್ದು, ಸತತ ಆರನೇ ದಿನವೂ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಅತ್ಯಂತ ಕಳಪೆ ವಿಭಾಗದಲ್ಲಿದೆ. ಶುಕ್ರವಾರ ಬೆಳಗ್ಗೆ 7 ಗಂಟೆಗೆ ರಾಜಧಾನಿಯ ಸರಾಸರಿ ಎಕ್ಯೂಐ 332 ದಾಖಲಾಗಿದ್ದು, ಕೆಲ ಪ್ರದೇಶಗಳಲ್ಲಿ ಮಾಲಿನ್ಯವು 'ತೀವ್ರ ಕಳಪೆ' ಮಿತಿಯಾದ 400 ಅನ್ನು ದಾಟಿದೆ.

ಎಲ್ಲಿ, ಎಷ್ಟು ವಾಯುಮಾಲಿನ್ಯ?: ರಾಷ್ಟ್ರೀಯ ರಾಜಧಾನಿ ಪ್ರದೇಶದ (ಎನ್​ಸಿಆರ್) ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟ ಹದಗೆಟ್ಟಿದೆ. ಅಧಿಕೃತ ಮಾಹಿತಿಯ ಪ್ರಕಾರ, ಗ್ರೇಟರ್ ನೋಯ್ಡಾದಲ್ಲಿ 272, ಗಾಜಿಯಾಬಾದ್​ನಲ್ಲಿ 258, ನೋಯ್ಡಾದಲ್ಲಿ 249, ಗುರುಗ್ರಾಮ್​​ನಲ್ಲಿ 258 ಮತ್ತು ಫರಿದಾಬಾದ್​ನಲ್ಲಿ 166 ಎಕ್ಯೂಐ ಇತ್ತು. ಈ ಅಂಕಿಅಂಶಗಳು ಅನಾರೋಗ್ಯಕರ ಮಾಲಿನ್ಯದ ಮಟ್ಟವನ್ನು ಸೂಚಿಸುತ್ತಿದ್ದು, ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಲಕ್ಷಾಂತರ ಜನರ ಮೇಲೆ ವಾಯುಮಾಲಿನ್ಯದ ದುಷ್ಪರಿಣಾಮ ಉಂಟಾಗುತ್ತಿದೆ.

ವಾಯುಮಾಲಿನ್ಯ ಲೆಕ್ಕಾಚಾರ ಹೇಗೆ?: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪ್ರಕಾರ, 0 ರಿಂದ 50 ರ ನಡುವಿನ ಎಕ್ಯೂಐ ಅನ್ನು 'ಉತ್ತಮ', 51-100 'ತೃಪ್ತಿಕರ', 101-200 'ಮಧ್ಯಮ', 201-300 'ಕಳಪೆ', 301-400 'ತುಂಬಾ ಕಳಪೆ', 401-450 'ತೀವ್ರ ಕಳಪೆ' ಮತ್ತು 450 ಕ್ಕಿಂತ ಹೆಚ್ಚು 'ತೀವ್ರ ಪ್ಲಸ್ ಕಳಪೆ' ಎಂದು ಪರಿಗಣಿಸಲಾಗುತ್ತದೆ.

ಏತನ್ಮಧ್ಯೆ, ದೆಹಲಿಯಲ್ಲಿ ಗುರುವಾರ ರಾತ್ರಿ ಋತುವಿನ ಅತ್ಯಧಿಕ ಚಳಿಯ ವಾತಾವರಣ ದಾಖಲಾಗಿದೆ. ಗುರುವಾರ ರಾತ್ರಿ ಕನಿಷ್ಠ ತಾಪಮಾನವು 10.1 ಡಿಗ್ರಿ ಸೆಲ್ಸಿಯಸ್​ಗೆ ಇಳಿದಿತ್ತು ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ವರದಿ ಮಾಡಿದೆ.

ಅಪಾಯಕಾರಿ ಮಾಲಿನ್ಯ ಮಟ್ಟವನ್ನು ನಿಭಾಯಿಸಲು, ಶಾಲೆಗಳಿಗೆ ಸಂಬಂಧಿಸಿದವುಗಳನ್ನು ಹೊರತುಪಡಿಸಿ ಎಲ್ಲಾ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್​ಎಪಿ) -4 ಕ್ರಮಗಳು ಡಿಸೆಂಬರ್ 2 ರಂದು ಮುಂದಿನ ವಿಚಾರಣೆಯವರೆಗೆ ಜಾರಿಯಲ್ಲಿರುತ್ತವೆ ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ನ್ಯಾಯಾಲಯವು ಕಟ್ಟುನಿಟ್ಟಾದ ಜಾರಿಯ ಅಗತ್ಯವನ್ನು ಒತ್ತಿಹೇಳಿದ್ದು, ಜಿಆರ್​ಎಪಿ -4 ಮಾರ್ಗಸೂಚಿಗಳ ಅನುಷ್ಠಾನದಲ್ಲಿ ಲೋಪಗಳಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಇಂಥ ವೈಫಲ್ಯಗಳಿಗೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅದು ಎಚ್ಚರಿಸಿದೆ.

ಭೌತಿಕ ತರಗತಿಗಳನ್ನು ಮುಂದುವರಿಸಲು ಅನುಮತಿ ನೀಡಿರುವ ನ್ಯಾಯಾಲಯ, ಎಕ್ಯೂಐ ಮಟ್ಟದಲ್ಲಿ ಸ್ಥಿರವಾದ ಇಳಿಕೆಯಾಗುವವರೆಗೆ ಜಿಆರ್​ಎಪಿ -3 ಅಥವಾ ಜಿಆರ್​ಎಪಿ -2 ಅಡಿಯಲ್ಲಿ ನಿರ್ಬಂಧಗಳನ್ನು ಸಡಿಲಿಸಲು ನ್ಯಾಯಾಲಯ ನಿರಾಕರಿಸಿತು. ಕಟ್ಟಡ ನಿರ್ಮಾಣ ಕಾಮಗಾರಿಗಳು ಸ್ಥಗಿತಗೊಂಡಿದ್ದರಿಂದ ಬಾಧಿತರಾಗುವ ಕಾರ್ಮಿಕರಿಗೆ ಕಾರ್ಮಿಕ ಸೆಸ್ ಮೂಲಕ ಪರಿಹಾರ ನೀಡುವಂತೆ ಅದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಪ್ರಸ್ತುತ ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿರುವ ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳ ನಿರ್ಮಾಣ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

ಇದನ್ನೂ ಓದಿ : ಲಿವ್-ಇನ್ ಪಾರ್ಟ್ನರ್​ ಮೇಲೆ ಅತ್ಯಾಚಾರಗೈದು ಉಸಿರುಗಟ್ಟಿಸಿ ಕೊಲೆ: ಮೃತದೇಹವನ್ನು 40-50 ತುಂಡಾಗಿ ಕತ್ತರಿಸಿ ಕಾಡಿಗೆಸೆದ ಕಟುಕ

ABOUT THE AUTHOR

...view details