ಕರ್ನಾಟಕ

karnataka

ETV Bharat / bharat

ಉತ್ತರಾಖಂಡದಲ್ಲಿ ಮೇಘಸ್ಫೋಟ: ಕೊಚ್ಚಿ ಹೋದ ಮನೆಗಳು, ಹೋಟೆಲ್​ಗಳು: ಐವರ ದುರ್ಮರಣ - cloudburst in Uttarakhand

ಉತ್ತರಾಖಂಡದಲ್ಲಿ ಭಾರಿ ಮಳೆಯಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ. ತೆಹ್ರಿ ಮತ್ತು ಹರಿದ್ವಾರ ಜಿಲ್ಲೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಮನೆಗಳು ಕೊಚ್ಚಿಕೊಂಡು ಹೋಗಿದ್ದರಿಂದ ಭಾರಿ ದುರಂತ ಸಂಭವಿಸಿದೆ.

ಉತ್ತರಾಖಂಡದಲ್ಲಿ ಮೇಘಸ್ಫೋಟ
ಉತ್ತರಾಖಂಡದಲ್ಲಿ ಮೇಘಸ್ಫೋಟ (ETV Bharat)

By ETV Bharat Karnataka Team

Published : Aug 1, 2024, 8:18 AM IST

ತೆಹ್ರಿ/ಹರಿದ್ವಾರ (ಉತ್ತರಾಖಂಡ): ಉತ್ತರಾಖಂಡದಲ್ಲಿ ಮೇಘಸ್ಫೋಟ ಸಂಭವಿಸಿದೆ. ತೆಹ್ರಿ ಮತ್ತು ಹರಿದ್ವಾರ ಜಿಲ್ಲೆಗಳಲ್ಲಿ ಹೋಟೆಲ್, ಹಲವು ಮನೆಗಳು, ಹಲವು ವಾಹನಗಳು ಕೊಚ್ಚಿಹೋಗಿವೆ. ಅಲ್ಲದೇ, ಭೂಕುಸಿತ ಹಾಗೂ ಮನೆ ಕುಸಿತ ಉಂಟಾಗಿ ಒಂದೇ ಕುಟುಂಬದ ಮೂವರು ಸೇರಿ ಐವರು ಮೃತಪಟ್ಟಿದ್ದಾರೆ. ರಕ್ಷಣಾ ಸಿಬ್ಬಂದಿಯಿಂದ ಪರಿಹಾರ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ.

ರಾಜ್ಯದ ಹಲವು ಭಾಗಗಳಲ್ಲಿ ಬುಧವಾರ ಸಂಜೆ ಭಾರೀ ಮಳೆಯಾಗಿದೆ. ಹರಿದ್ವಾರ ಜಿಲ್ಲೆಯಲ್ಲಿ ರೂರ್ಕಿ ಬಳಿಯ ಭರ್ಪುರ್ ಗ್ರಾಮದಲ್ಲಿ ಮನೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದೆಡೆ, ತೆಹ್ರಿ ಜಿಲ್ಲೆಯ ಘನ್ಸಾಲಿ ಪ್ರದೇಶದ ಹಳ್ಳಿಯೊಂದರಲ್ಲಿ ಮೇಘಸ್ಫೋಟದ ನಂತರ ಕುಟುಂಬವೊಂದು ನಾಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹರಿದ್ವಾರದಲ್ಲಿ ಕೆಲವು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಇದರಿಂದ ಇಡೀ ನಗರ ಜಲಾವೃತಗೊಂಡಿದೆ. ಖಾರ್ಖಾರಿ ಪ್ರದೇಶದ ಸುಖಿ ನದಿಯಲ್ಲಿ ಕನ್ವಾರಿಯಾಗಳ ಟ್ರಕ್ ಕೊಚ್ಚಿಕೊಂಡುಹೋಗಿದೆ. ಆದರೆ, ಇದರಲ್ಲಿ ಕನ್ವಾರಿಯಾಗಳು ಇರಲಿಲ್ಲ. ಜನರ ಕಣ್ಣೆದುರೇ ಟ್ರಕ್ ನೀರಿನಲ್ಲಿ ತೇಲಿ ಹೋಗಿದೆ. ಇದೇ ವೇಳೆ, ತೆಹ್ರಿ ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರು ಅವಶೇಷಗಳಡಿ ಸಿಲುಕಿದ್ದರು. ರಕ್ಷಣಾ ತಂಡಗಳ ಸಾಕಷ್ಟು ಪ್ರಯತ್ನದ ಬಳಿಕ ಅವರನ್ನು ಪತ್ತೆ ಹಚ್ಚಿದ್ದಾರೆ. ಆದರೆ, ಅಷ್ಟರಲ್ಲೇ ಇಬ್ಬರು ಮೃತಪಟ್ಟಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಇದಲ್ಲದೇ, ಅನೇಕ ಕಡೆಗಳಲ್ಲಿ ರಸ್ತೆಗಳು ಹಾಗೂ ಸೇತುವೆಗಳು ಸಹ ಕೊಚ್ಚಿಹೋಗಿವೆ. ರುದ್ರಪ್ರಯಾಗದಲ್ಲಿ ಭಾರೀ ಮಳೆಗೆ ಕೇದಾರನಾಥ ಯಾತ್ರೆಗೂ ಅಡ್ಡಿ ಉಂಟಾಗಿದೆ. ಕೇದಾರನಾಥ ಪಾದಚಾರಿ ಮಾರ್ಗಕ್ಕೆ ಭಾರಿ ಹಾನಿಯಾಗಿದೆ. ರಾಂಬಡ ಮತ್ತು ಲಿಂಚೋಳಿ ನಡುವಿನ ಕಾಲುದಾರಿ ಹಲವೆಡೆ ಹಾಳಾಗಿದೆ.

ಇದನ್ನು ಓದಿ:ಈಶಾನ್ಯ ರಾಜ್ಯಗಳಲ್ಲಿ 4 ತಿಂಗಳಲ್ಲಿ 196 ಭೂಕುಸಿತ ದುರಂತಗಳು ದಾಖಲು: ಕೇಂದ್ರ ಸರ್ಕಾರ

ABOUT THE AUTHOR

...view details