ಲಖನೌ(ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಪಿಲಿಭಿತ್‌ನಲ್ಲಿ ಚುನಾವಣಾ ರ‍್ಯಾಲಿ ನಡೆಸಿದ್ದಾರೆ. ವರುಣ್ ಗಾಂಧಿಗೆ ಪಿಲಿಭಿತ್ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಬಳಿಕ ಇದೇ ಮೊದಲ ಬಾರಿಗೆ ಇಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಪಿಲಿಭಿತ್ ಕ್ಷೇತ್ರ ಮನೇಕಾ ಗಾಂಧಿ ಮತ್ತು ಅವರ ಮಗ ವರುಣ್ ಗಾಂಧಿ ಹಿಡಿತದಲ್ಲಿದೆ. ಸ್ಪಪಕ್ಷ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸುತ್ತಿದ್ದ ವರುಣ್ ಗಾಂಧಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಈ ಕ್ಷೇತ್ರಕ್ಕೆ ಅವರ ಬದಲಾಗಿ ಜಿತಿನ್ ಪ್ರಸಾದ್ಗೆ ಬಿಜೆಪಿ ಮಣೆ ಹಾಕಿದೆ. ವರುಣ್ ಗಾಂಧಿ ಪ್ರತಿನಿಧಿಸುತ್ತಿದ್ದ ಈ ಕ್ಷೇತ್ರವನ್ನು ಮತ್ತೆ ತಮ್ಮ ತೆಕ್ಕೆಗೆ ಪಡೆಯಲು ಸ್ವತಃ ಪ್ರಧಾನಿ ಮೋದಿ ಅವರೇ ಇಲ್ಲಿಗೆ ಬಂದು ಭರ್ಜರಿ ಪ್ರಚಾರ ನಡೆಸಿದ್ದಾರೆ.
ಪಿಲಿಭಿತ್‌ನಲ್ಲಿ ತಾಯಿ - ಮಗನದ್ದೇ ಪ್ರಾಬಲ್ಯ: 1989ರಲ್ಲಿ ಮನೇಕಾ ಗಾಂಧಿ ಜನತಾ ದಳದಿಂದ ಪಿಲಿಭಿತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದರು. ನಂತರ 1991ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯ ಸಂತೋಷ್ ಗಂಗ್ವಾರ್ ಎದುರು ಸೋಲುಂಡರು. 1996ರಲ್ಲಿ ಜನತಾ ದಳದಿಂದ ಸ್ಪರ್ಧಿಸಿ ಮತ್ತೊಮ್ಮೆ ಸಂಸತ್ ಮೇಟ್ಟಿಲೇರಿದ್ದರು. 1998, 1999ರಲ್ಲಿ ಬಿಜೆಪಿಯ ಬೆಂಬಲದೊಂದಿಗೆ ಮನೇಕಾ ಗಾಂಧಿ ಪಕ್ಷೇತರ ಅಭ್ಯರ್ಥಿಯಾಗಿ ಪಿಲಿಭಿತ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದರು. ಬಳಿಕ 2004 ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾಗಿ, ಅದೇ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬೀಗಿದರು.
ಈ ಕ್ಷೇತ್ರದಲ್ಲಿ ಮನೇಕಾ ಗಾಂಧಿ ಅವರ ಸತತವಾಗಿ ಗೆಲುವು ಸಾಧಿಸುವಲ್ಲಿ ವರುಣ್ ಗಾಂಧಿ ಪ್ರಮುಖ ಪಾತ್ರ ವಹಿಸಿದ್ದರು. 2009ರಲ್ಲಿ ವರುಣ್ ಗಾಂಧಿ ಬಿಜೆಪಿಯಿಂದ ಪಿಲಿಭಿತ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರೆ, ಮನೇಕಾ ಗಾಂಧಿ ಸುಲ್ತಾನ್ ಪುರದಿಂದ ಗೆದ್ದಿದ್ದರು. 2014ರ ಲೋಕಸಭಾ ಚುನಾವಣೆಯಲ್ಲಿ ತಾಯಿ - ಮಗನ ತಮ್ಮ ಕ್ಷೇತ್ರಗಳನ್ನು ಬದಲಾಯಿಸಿಕೊಂಡರು. ವರುಣ್ ಅವರನ್ನು ಸುಲ್ತಾನ್ ಪುರ ದಿಂದ ಮತ್ತು ಮನೇಕಾ ಗಾಂಧಿ ಪಿಲಿಭಿತ್ನಿಂದ ಸ್ಪರ್ಧಿಸಿ ಜಯಗಳಿಸಿದರು.