ನವದೆಹಲಿ:ಸಾಕಿದ ಮಾಲೀಕರ ಮೇಲೆಯೇ ಮಾರಣಾಂತಿಕ ದಾಳಿ ನಡೆಸುವ ಪಿಟ್ಬುಲ್, ಅಮೆರಿಕನ್ ಬುಲ್‌ಡಾಗ್, ರೊಟ್ಟಿವೈಲರ್ ಸೇರಿದಂತೆ ಹಲವಾರು ನಾಯಿಯ ತಳಿಗಳನ್ನು "ಅಪಾಯಕಾರಿ" ಎಂದು ಕೇಂದ್ರ ಸರ್ಕಾರ ಗುರುತಿಸಿದೆ. ಈ ವಿದೇಶಿ ನಾಯಿ ತಳಿಗಳ ಸಂತಾನೋತ್ಪತ್ತಿ, ಸಾಕುವ, ಮಾರಾಟ ಮಾಡುವುದನ್ನು ದೇಶದಲ್ಲಿ ನಿಷೇಧಿಸಿದೆ.
ಕೇಂದ್ರ ಪಶುಸಂಗೋಪನೆ ಇಲಾಖೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಬಗ್ಗೆ ಪತ್ರ ಬರೆದಿದ್ದು, ಮಾನವನ ಜೀವಕ್ಕೆ ಅಪಾಯ ತಂದೊಡ್ಡುವ ಪಿಟ್ಬುಲ್, ಅಮೆರಿಕನ್ ಬುಲ್‌ಡಾಗ್ ಸೇರಿ ಹಲವಾರು ವಿವಿಧ ತಳಿಯ ವಿದೇಶಿ ನಾಯಿಗಳನ್ನು ಸಾಕಲು ಅನುಮತಿ ನೀಡದಂತೆ ಸೂಚಿಸಿದೆ. ಜೊತೆಗೆ ಅಂತಹ ತಳಿಗಳ ನಾಯಿಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ನಿಷೇಧ ವಿಧಿಸಲಾಗಿದೆ.
ವಿಶೇಷವೆಂದರೆ, ಮಕ್ಕಳು, ಹಿರಿಯರ ಮೇಲೆ ಮಾರಣಾಂತಿಕ ದಾಳಿ ಮಾಡಿ ಆಕ್ರಮಣಕಾರಿ ಪ್ರವೃತ್ತಿಯ ನಾಯಿಗಳನ್ನು ಜನರು ಸಾಕುವುದಕ್ಕೆ ಅವಕಾಶ ನೀಡಬಾರದು. ನಾಯಿಗಳನ್ನು ವಿವಿಧ ಸ್ಪರ್ಧೆಗೆ ಬಳಸುವುದನ್ನೂ ನಿಷೇಧಿಸಬೇಕು ಎಂದು ಪ್ರಾಣಿ ದಯಾ ಸಂಘ (ಪೆಟಾ)ವು ಮನವಿ ಸಲ್ಲಿಸಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಮಹತ್ವದ ನಿರ್ಧಾರಕ್ಕೆ ಬಂದಿದೆ.
ನಾಯಿ, ಮನುಷ್ಯ ಜೀವ ರಕ್ಷಣೆ:ಅಪಾಯಕಾರಿ ಎಂದು ಗುರುತಿಸಲಾದ ನಾಯಿ ತಳಿಗಳನ್ನು ದೇಶದಲ್ಲಿ ನಿಷೇಧ ಮಾಡಿರುವುದು, ಆ ಶ್ವಾನಗಳು ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಇದು ತಡೆಯುತ್ತದೆ. ಆಕ್ರಮಣಶೀಲ ನಾಯಿಗಳನ್ನು ಸ್ಪರ್ಧೆಗಳಿಗೆ ಬಳಕೆ ಮಾಡುವುದೂ ನಿಲ್ಲುತ್ತದೆ. ಜೊತೆಗೆ ಅವುಗಳು ಮನುಷ್ಯರ ಮೇಲೆ ದಾಳಿ ಮಾಡಿ ಪ್ರಾಣ ಹಾನಿ ಮಾಡುವುದು ಇದರಿಂದ ನಿಲ್ಲುತ್ತದೆ ಎಂದು ಪೆಟಾ ಸಂಸ್ಥೆಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.