ನವದೆಹಲಿ:370ನೇ ವಿಧಿ, ಚುನಾವಣಾ ಬಾಂಡ್ ಯೋಜನೆ ರದ್ದು ಸೇರಿದಂತೆ ಹಲವು ಮಹತ್ವದ ತೀರ್ಪುಗಳ ಭಾಗವಾಗಿದ್ದ ಹಿರಿಯ ನ್ಯಾಯಾಧೀಶ ಸಂಜೀವ್ ಖನ್ನಾ ಅವರು ಸುಪ್ರೀಂ ಕೋರ್ಟ್‌ನ 51ನೇ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಕವಾಗಿದ್ದಾರೆ. ಖನ್ನಾ ಅವರು ನವೆಂಬರ್ 11ರಂದು ಮುಂದಿನ ಸಿಜೆಐ ಆಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಹಾಲಿ ಸಿಜೆಐ ಆಗಿರುವ ಡಿ.ವೈ.ಚಂದ್ರಚೂಡ್ ಅವರು ನವೆಂಬರ್ 10ರಂದು ನಿವೃತ್ತರಾಗಲಿದ್ದಾರೆ. ನ್ಯಾ.ಖನ್ನಾ ಅವರನ್ನು ತನ್ನ ಉತ್ತರಾಧಿಕಾರಿಯನ್ನಾಗಿ ನೇಮಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಅಕ್ಟೋಬರ್ 17ರಂದು ಅವರು ಶಿಫಾರಸು ಮಾಡಿದ್ದರು. ಇದರ ಬೆನ್ನಲ್ಲೇ, ಕೇಂದ್ರ ಸರ್ಕಾರ ಖನ್ನಾ ಅವರನ್ನು ಸಿಜೆಐ ಆಗಿ ನೇಮಿಸಿದೆ. ಅವರು ಆರು ತಿಂಗಳ ಕಾಲ ನ್ಯಾಯಾಂಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ. ಮೇ 13, 2025ರವರೆಗೆ ಅಧಿಕಾರವಧಿ ಇರಲಿದೆ.
ಖನ್ನಾ ಕಾನೂನು ಹಾದಿ:1960ರ ಮೇ 14ರಂದು ಜನಿಸಿರುವ ಸಂಜೀವ್ ಖನ್ನಾ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದಾರೆ. 2005ರಲ್ಲಿ ದೆಹಲಿ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ ಪದೋನ್ನತಿ ಪಡೆದಿದ್ದರು. 2006ರಲ್ಲಿ ಕಾಯಂ ನ್ಯಾಯಾಧೀಶರಾಗಿ ನೇಮಕವಾದರು. 2019ರ ಜನವರಿ 18ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ಬಡ್ತಿ ಪಡೆದರು.
ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾದ ಖನ್ನಾ ಹಲವಾರು ಮಹತ್ವದ ಪ್ರಕರಣಗಳ ತೀರ್ಪಿನ ಭಾಗವಾಗಿದ್ದಾರೆ. ರಾಜಕೀಯ ಪಕ್ಷಗಳು ನಿಧಿ ಸಂಗ್ರಹಣೆಗಾಗಿ ರೂಪಿಸಲಾಗಿದ್ದ ಚುನಾವಣಾ ಬಾಂಡ್ ಯೋಜನೆಯನ್ನು ಅಸಾಂವಿಧಾನಿಕ ಎಂದು ಘೋಷಿಸಿದ ಐವರು ನ್ಯಾಯಾಧೀಶರ ಪೀಠದಲ್ಲಿ ಇವರೂ ಒಬ್ಬರು.