ನವದೆಹಲಿ:ರೈತರ ದೆಹಲಿ ಚಲೋ ಹೋರಾಟ ತೀವ್ರಗೊಳ್ಳುತ್ತಿರುವ ನಡುವೆ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದೆ. ಮುಂಬರುವ ಹಂಗಾಮಿನಲ್ಲಿ ಕಬ್ಬು ಖರೀದಿ ದರವನ್ನು ಪ್ರತಿ ಕ್ವಿಂಟಲ್‌ಗೆ 25 ರೂಪಾಯಿ ಹೆಚ್ಚಳ ಮಾಡಿದೆ. ಅಂದರೆ ಈಗಿರುವ 315 ರೂಪಾಯಿಗೆ 25 ಸೇರಿಸಿ 340 ರೂಪಾಯಿ ಫೇರ್ ಅಂಡ್ ರೆಮ್ಯುನ್ರೇಟಿವ್ ಪ್ರೈಸ್ (ಎಫ್‌ಆರ್‌ಪಿ) ನಿಗದಿ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಸಭೆಯಲ್ಲಿ ಎಫ್‌ಆರ್‌ಪಿ ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದು ಸಾರ್ವತ್ರಿಕ ಲೋಕಸಭೆ ಚುನಾವಣೆಗೂ ಮುನ್ನ ರೈತರಿಗೆ ನೀಡಿದ ಭರ್ಜರಿ ಉಡುಗೊರೆಯಾಗಿದೆ.
ಅಕ್ಟೋಬರ್‌ನಿಂದ ಪ್ರಾರಂಭವಾಗುವ 2024-25ರ ಹಂಗಾಮಿಗೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾದ ಕನಿಷ್ಠ ಬೆಲೆಯನ್ನು ಕ್ವಿಂಟಲ್‌ಗೆ 25 ರೂಪಾಯಿ ಹೆಚ್ಚಳ ಮಾಡಲಾಗಿದೆ. ರೈತರಿಂದ ಪ್ರತಿ ಕ್ವಿಂಟಲ್‌ಗೆ 340 ರೂ.ನಂತೆ ನೀಡಿ ಕಾರ್ಖಾನೆಗಳು ಕಬ್ಬು ಖರೀದಿಸುವಂತೆ ಸರ್ಕಾರ ನಿರ್ಧರಿಸಿದೆ.
ಅತಿ ಹೆಚ್ಚು ಏರಿಕೆ:ಕಬ್ಬು ಖರೀದಿ ದರದಲ್ಲಿ ಈವರೆಗೂ ಮಾಡಲಾದ ಅತಿ ಹೆಚ್ಚು ಏರಿಕೆ ಇದಾಗಿದೆ. 2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಬ್ಬಿಗೆ ಘೋಷಿಸಿದ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಾಗಿದೆ. ಎರಡನೇ ಬಾರಿಗೆ ಕೇಂದ್ರ ಸರ್ಕಾರ ಎಫ್‌ಆರ್‌ಪಿಯನ್ನು ಪ್ರತಿ ಕ್ವಿಂಟಲ್‌ಗೆ 25 ರೂ. ಹೆಚ್ಚಳ ಮಾಡಿದೆ. ಈ ಹಿಂದೆ 2017-18 ನೇ ಸಾಲಿನಲ್ಲೂ ಇಷ್ಟೇ ಪ್ರಮಾಣದ ಹೆಚ್ಚಳ ಮಾಡಲಾಗಿತ್ತು.