ನವದೆಹಲಿ:ನೀಟ್ ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮತ್ತಿಬ್ಬರು ಆರೋಪಿಗಳನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಶನಿವಾರ ಅರೆಸ್ಟ್ ಮಾಡಿದೆ. ಮಂಗಳಂ ಬಿಷ್ಣೋಯ್ ಶರ್ಮಾ ಮತ್ತು ದೀಪೇಂದರ್ ಶರ್ಮಾ ಬಂಧಿತರು. ಇವರು ರಾಜಸ್ಥಾನದ ಭರತ್‌ಪುರ ವೈದ್ಯಕೀಯ ಶಾಲೆಯ ಎಂಬಿಬಿಎಸ್ ವಿದ್ಯಾರ್ಥಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ಆದೇಶದಂತೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(ಎನ್‌ಟಿಎ) ನಗರಗಳು ಮತ್ತು ಪರೀಕ್ಷಾ ಕೇಂದ್ರಗಳ ಮೂಲಕ ನೀಟ್ ಫಲಿತಾಂಶಗಳನ್ನು ಪ್ರಕಟಿಸಿತ್ತು. ಈ ಫಲಿತಾಂಶವನ್ನು ಪ್ರಕಟಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳ ಗುರುತು ಬಹಿರಂಗಪಡಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ 40ಕ್ಕೂ ಹೆಚ್ಚು ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಇತ್ತೀಚೆಗೆ ವಿಚಾರಣೆ ನಡೆಸಿತು. ಶನಿವಾರ ಮಧ್ಯಾಹ್ನ 12 ಗಂಟೆಯೊಳಗೆ ನಗರವಾರು ಹಾಗೂ ಪರೀಕ್ಷಾ ಕೇಂದ್ರವಾರು ಫಲಿತಾಂಶ ಪ್ರಕಟಿಸುವಂತೆ ಎನ್‌ಟಿಎಗೆ ಕೋರ್ಟ್ ಸೂಚಿಸಿತ್ತು.
ಪತ್ರಿಕೆ ಸೋರಿಕೆಯಾದ ಶಂಕಿತ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾದವರು ಇತರ ಕೇಂದ್ರಗಳಿಗೆ ಹೋಲಿಸಿದರೆ ಹೆಚ್ಚು ಅಂಕಗಳನ್ನು ಪಡೆದಿದ್ದಾರೆಯೇ ಎಂಬುದನ್ನು ತಿಳಿಯಲು ಈ ಪಟ್ಟಿ ಬಿಡುಗಡೆ ಮಾಡಲು ಬಯಸುತ್ತೇವೆ ಎಂದು ಕೋರ್ಟ್ ಹೇಳಿತ್ತು. ವಿದ್ಯಾರ್ಥಿಗಳ ಗುರುತು ಬಹಿರಂಗವಾಗದಂತೆ ನೋಡಿಕೊಳ್ಳಲು ಎನ್‌ಟಿಎ ವೆಬ್‌ಸೈಟ್‌ನಲ್ಲೇ ಫಲಿತಾಂಶಗಳನ್ನು ಅಪ್‌ಲೋಡ್ ಮಾಡಬೇಕು ಎಂದು ತಿಳಿಸಿ, ಮುಂದಿನ ವಿಚಾರಣೆಯನ್ನು ಜುಲೈ 22ರಂದು ಮುಂದೂಡಿದೆ.