ನವದೆಹಲಿ:ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ, ಎಂಎಲ್ಸಿ ಕೆ.ಕವಿತಾ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಬಂಧಿಸಿತು.
ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿಯೂ ಆಗಿರುವ ಕವಿತಾ ಸದ್ಯ ತಿಹಾರ್ ಜೈಲಿನಲ್ಲಿ ಇಡಿ ಬಂಧನದಲ್ಲಿದ್ದಾರೆ. ಇದೀಗ ಸಿಬಿಐ ತನ್ನ ವಶಕ್ಕೆ ಪಡೆದು ಇದೇ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ವಿಚಾರಣೆ ನಡೆಸುತ್ತಿದೆ.
ಸಿಬಿಐ ಅಧಿಕಾರಿಗಳು ಇತ್ತೀಚೆಗೆ ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದು ಜೈಲಿನೊಳಗೆ ಕವಿತಾರನ್ನು ವಿಚಾರಣೆ ನಡೆಸಿದ್ದರು. ಪ್ರಕರಣದ ಸಹ ಆರೋಪಿಯಾಗಿರುವ ಬುಚ್ಚಿ ಬಾಬು ಅವರ ಫೋನ್ನಲ್ಲಿ ವಾಟ್ಸ್‌ಆ್ಯಪ್ ಚಾಟ್ ಮತ್ತು ಭೂ ಅವ್ಯವಹಾರದ ಕುರಿತು ಬಿಆರ್‌ಎಸ್ ನಾಯಕಿಯನ್ನು ಪ್ರಶ್ನಿಸಲಾಗಿದೆ. ಇದರ ಜತೆಗೆ ರದ್ದಾಗಿರುವ ದೆಹಲಿ ಮದ್ಯ ನೀತಿ ಹಗರಣದಲ್ಲಿ 100 ಕೋಟಿ ರೂಪಾಯಿ ಕಿಕ್ಬ್ಯಾಕ್ ನೀಡಿದ ಬಗ್ಗೆಯೂ ವಿಚಾರಣೆ ನಡೆಸಲಾಗಿದೆ.
ಪ್ರಕರಣದಲ್ಲಿ ಕವಿತಾ ಅವರ ಸಂಸ್ಥೆ ಭಾಗಿಯಾಗಿದೆ ಎಂಬ ಆರೋಪದ ಮೇಲೆ ಪ್ರಶ್ನಿಸಲು ಸಿಬಿಐ ಅಧಿಕಾರಿಗಳು ಈಚೆಗೆ ತಿಹಾರ್ ಜೈಲಿಗೆ ತೆರಳಿದ್ದರು ಎಂದು ಮೂಲಗಳು ತಿಳಿಸಿವೆ. ಬಿಆರ್‌ಎಸ್ ನಾಯಕಿ ಅಧಿಕಾರಿಗಳ ಪ್ರಶ್ನೆಗೆ ಸರಿಯಾದ ಉತ್ತರ ನೀಡದೇ ಇದ್ದುದರಿಂದ ಇದೀಗ ಬಂಧನಕ್ಕೆ ಒಳಪಡಿಸಲಾಗಿದೆ.
ಸಿಬಿಐ ವಿರುದ್ಧ ಅರ್ಜಿ ಸಲ್ಲಿಸಿದ್ದ ಕವಿತಾ:ಇಡಿ ಬಂಧನದಲ್ಲಿರುವ ತಮ್ಮನ್ನು ಸಿಬಿಐ ವಿಚಾರಣೆ ನಡೆಸಬಾರದು ಎಂದು ಕೋರಿ ಕವಿತಾ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಇದನ್ನು ಕೋರ್ಟ್ ಅಮಾನ್ಯ ಮಾಡಿತ್ತು. ಇದರ ಜತೆಗೆ ಪುತ್ರನ ಶೈಕ್ಷಣಿಕ ಪರೀಕ್ಷೆಗಳು ಇರುವ ಕಾರಣ ಮಧ್ಯಂತರ ಜಾಮೀನು ನೀಡಬೇಕು ಎಂದು ಕೋರಿದ್ದ ಅರ್ಜಿಯೂ ತಿರಸ್ಕೃತವಾಗಿದೆ.
ಕವಿತಾ ಅವರ 'ಸೌತ್ ಗ್ರೂಪ್' ಕಂಪನಿಯು ದೆಹಲಿಯ ಮದ್ಯ ನೀತಿ ಹಗರಣದಲ್ಲಿ ಪರವಾನಗಿಗೆ 100 ಕೋಟಿ ರೂಪಾಯಿ ಪಡೆದಿದೆ ಎಂಬ ಆರೋಪವಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಇಡಿ ಅಧಿಕಾರಿಗಳು ಮಾರ್ಚ್ 15ರಂದು ಹೈದರಾಬಾದ್‌ನಲ್ಲಿನ ಅವರ ಬಂಜಾರಾ ಹಿಲ್ಸ್ ನಿವಾಸದಿಂದ ಬಂಧಿಸಿತ್ತು. 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.
ಇದನ್ನೂ ಓದಿ:ತೆಲಂಗಾಣ ಮಾಜಿ ಸಿಎಂ ಪುತ್ರಿ ಕವಿತಾಗೆ ಮಧ್ಯಂತರ ಜಾಮೀನು ನಿರಾಕರಿಸಿದ ಕೋರ್ಟ್, ಜೈಲೇ ಗತಿ - BRS leader Kavitha