ಚೆನ್ನೈ (ತಮಿಳುನಾಡು):ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ನಿರ್ಣಯಿಸಿರುವಂತೆ ಪ್ರತಿದಿನ 1 ಟಿಎಂಸಿ ನೀರನ್ನು ಕರ್ನಾಟಕ ಸರ್ಕಾರ ಬಿಡದಿದ್ದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲು ತಮಿಳುನಾಡು ಸರ್ಕಾರ ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಿದೆ.
ಕರ್ನಾಟಕ ಸರ್ಕಾರ ನಿತ್ಯ 8 ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ತನ್ನ ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಿತ್ತು. ಇದರ ವಿರುದ್ಧ ತಮಿಳುನಾಡು ಸರ್ಕಾರ ಇಂದು (ಮಂಗಳವಾರ) ಸರ್ವಪಕ್ಷಗಳ ಸಭೆ ಕರೆದು ಒಮ್ಮತದ ತೀರ್ಮಾನಕ್ಕೆ ಬಂದಿದೆ. ಸಿಎಂ ಸ್ಟಾಲಿನ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕಾವೇರಿ ನೀರು ಪಡೆಯುವ ವಿಚಾರವಾಗಿ ಎಲ್ಲ ಪಕ್ಷಗಳ ನಾಯಕರು ಚರ್ಚಿಸಿದರು.
ಕರ್ನಾಟಕ ಸರ್ಕಾರ ಸಿಡಬ್ಲ್ಯುಆರ್ಸಿಯ ನಿರ್ದೇಶನದಂತೆ ರಾಜ್ಯಕ್ಕೆ ನೀರು ಹರಿಸದಿದ್ದರೆ, ಅದನ್ನು ಪಡೆದುಕೊಳ್ಳಲು ಅಗತ್ಯಬಿದ್ದಲ್ಲಿ ಸುಪ್ರೀಂಕೋರ್ಟ್ ಮೊರೆ ಹೋಗಲಾಗುವುದು ಎಂದು ಸರ್ಕಾರ ತಿಳಿಸಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ಬಿಡಲು ನಿರಾಕರಿಸುತ್ತಿರುವ ಕರ್ನಾಟಕ ಸರ್ಕಾರದ ನಿರ್ಣಯವನ್ನು ತಮಿಳು ಪಕ್ಷಗಳು ಖಂಡಿಸಿವೆ.
ಇನ್ನೊಂದು ನಿರ್ಣಯದಲ್ಲಿ, ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳ ಅನುಸಾರ ನೀರು ಬಿಡುವಂತೆ ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಆರ್ಸಿ) ಸೂಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಸಿಡಬ್ಲ್ಯುಆರ್ಸಿ ಆದೇಶವೇನು?:ತಮಿಳುನಾಡಿಗೆ ಜುಲೈ 12 ರಿಂದ ಜುಲೈ 31ರವರೆಗೆ ಪ್ರತಿದಿನ 1 ಟಿಎಂಸಿ ಕಾವೇರಿ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್ಸಿ) ಕರ್ನಾಟಕ ರಾಜ್ಯಕ್ಕೆ ಶಿಫಾರಸು ಮಾಡಿತ್ತು. ಅಂದರೆ, ಜುಲೈ ಅಂತ್ಯದವರೆಗೆ ದಿನನಿತ್ಯ 11,500 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡುವಂತೆ ಸೂಚಿಸಿದೆ.
ಕರ್ನಾಟಕದ ನಿರ್ಧಾರವೇನು?:ಸಿಡಬ್ಲ್ಯುಆರ್ಸಿ ಸೂಚನೆಯ ಬಳಿಕ ಕರ್ನಾಟಕ ಸರ್ಕಾರ ಜುಲೈ 14 ರಂದು ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ನೀರಿನ ಹರಿವು ಈಗ ಹೆಚ್ಚುತ್ತಿದ್ದು, ಆದೇಶ ಪಾಲನೆ ಕಷ್ಟವಾಗಲಿದೆ. ಹೀಗಾಗಿ, ನಿತ್ಯ 11,500 ಕ್ಯುಸೆಕ್ ಬದಲಿಗೆ 8 ಸಾವಿರ ಕ್ಯುಸೆಕ್ ನೀರು ಹರಿಸಲು ಸಭೆಯಲ್ಲಿ ನಿರ್ಧರಿಸಲಾಗಿತ್ತು. ಸಿಡಬ್ಲ್ಯುಆರ್ಸಿ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲೂ ನಿರ್ಣಯಿಸಲಾಗಿತ್ತು.
ಡಿಸಿಎಂ ಡಿಕೆಶಿ ಹೇಳಿಕೆ: 'ತಮಿಳುನಾಡಿನ ಬಿಳಿಗುಂಡ್ಲುವಿಗೆ ಪ್ರತಿದಿನ ಒಂದೂವರೆ ಟಿಎಂಸಿಯಷ್ಟು ನೀರು ತಲುಪುತ್ತಿದೆ' ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಸುಪ್ರೀಂಕೋರ್ಟ್‍ನ ತೀರ್ಪಿನ ಪ್ರಕಾರ, "ಬಿಳಿಗುಂಡ್ಲುವಿಗೆ ಈ ವೇಳೆಗೆ 40 ಟಿಎಂಸಿ ನೀರು ಹೋಗಬೇಕಿತ್ತು. ಈವರೆಗೂ 6 ಟಿಎಂಸಿ ನೀರು ಹರಿದಿದೆ. ಪ್ರಸ್ತುತ ಉತ್ತಮ ಮಳೆಯಾಗುತ್ತಿರುವುದರಿಂದ ಪ್ರತಿದಿನ ಒಂದೂವರೆ ಟಿಎಂಸಿಯಷ್ಟು ಹರಿಸಲಾಗುತ್ತಿದೆ. ಇದೇ ವಾತಾವರಣ ಮುಂದುವರೆದರೆ ಸಮಸ್ಯೆ ಬಗೆಹರಿಯಲಿದೆ" ಎಂದು ತಿಳಿಸಿದರು.
ಇದನ್ನೂ ಓದಿ:'ತಮಿಳುನಾಡಿನ ಬಿಳಿಗುಂಡ್ಲುವಿಗೆ ಪ್ರತಿದಿನ ಒಂದೂವರೆ ಟಿಎಂಸಿ ನೀರು' : ಡಿ.ಕೆ.ಶಿವಕುಮಾರ್ - water to Tamil Nadu