ಕರ್ನಾಟಕ

karnataka

ETV Bharat / bharat

ಮೂರು ಕಡೆ ಭೀಕರ ರಸ್ತೆ ಅಪಘಾತ: ಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದ ಐವರು ಸೇರಿ ಒಟ್ಟು 15 ಸಾವು! - ROAD ACCIDENT IN VARANASI

ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಲು ತೆರಳಿದ್ದ ಕರ್ನಾಟಕದ ವಾಹನ ಸೇರಿದಂತೆ ಉತ್ತರ ಪ್ರದೇಶದ ವಾರಾಣಸಿ ಹಾಗೂ ಬಿಹಾರದ ಭೋಜ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಟ್ಟು 15 ಜನ ಮೃತಪಟ್ಟಿದ್ದಾರೆ.

Car collides with truck Karnataka 5 devotees dead 6 injured Uttar Pradesh Varanasi accident
ವಾರಣಾಸಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (ETV Bharat)

By ETV Bharat Karnataka Team

Published : Feb 21, 2025, 1:27 PM IST

Updated : Feb 21, 2025, 1:34 PM IST

ವಾರಾಣಸಿ (ಉತ್ತರ ಪ್ರದೇಶ):ಪ್ರಯಾಗ್​ರಾಜ್ ಮಹಾಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದವರಿದ್ದ ಕ್ರೂಸರ್ ವಾಹನವೊಂದು ನಿಂತಿದ್ದ ಟ್ರಕ್​ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಐವರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಮಿರ್ಜಾಮುರಾದ್ ಪ್ರದೇಶದ ರೂಪಾಪುರ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಇವರೆಲ್ಲ ಕರ್ನಾಟಕದ ಬೀದರ್​ ನಗರದ ಲಾಡಗಿರಿ ಬಡಾವಣೆಯವರಾಗಿದ್ದಾರೆ.

ಮೃತ ಐವರಲ್ಲಿ ಪತಿ, ಪತ್ನಿ ಮತ್ತು ಇಬ್ಬರು ಮಕ್ಕಳು ಸೇರಿದ್ದಾರೆ. ಅಪಘಾತದ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿರುವುದಾಗಿ ಮಿರ್ಜಾಮುರಾದ್ ಠಾಣಾ ಪೊಲೀಸರು ಮಾಹಿತಿ ತಿಳಿಸಿದ್ದಾರೆ.

ವಾರಣಾಸಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (ETV Bharat)

ಸಂತೋಷ್ ಕುಮಾರ್(43), ಸುನೀತಾ(35), ನೀಲಮ್ಮ(60) ಗಣೇಶ್ ಮತ್ತು ಶಿವಕುಮಾರ್ ಮೃತ ದುರ್ದೈವಿಗಳು. ಕವಿತಾ, ಅನಿತಾ, ಲೀಲಾವತಿ, ಸಾಯಿನಾಥ್, ಭಗವಾನ್ ಮತ್ತು ಸುಲೋಚನಾ ಗಾಯಗೊಂಡಿದ್ದು, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಐವರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ.

ವಾರಣಾಸಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (ETV Bharat)

ಮಹಾಕುಂಭಮೇಳಕ್ಕೆ ತೆರಳಿದ್ದ ಕರ್ನಾಟಕದವರಿದ್ದ ಕ್ರೂಸರ್ ವಾಹನವು ನಿಂತಿದ್ದ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಐವರು ಸಾವನಪ್ಪಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಯಿಂದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಅಸುನೀಗಿದ್ದಾರೆ. ಆರು ಜನ ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಕುಂಭಮೇಳಕ್ಕೆ ತೆರಳಿ ವಾಪಸ್​ ಆಗುತ್ತಿದ್ದ ಬೀದರ್‌ನ ಲಾಡಗೇರಿ ಬಡಾವಣೆಯ 12 ಮಂದಿ ಪ್ರಯಾಣಿಸುತ್ತಿದ್ದ ಕ್ರೂಸರ್ ವಾಹನ ಇದಾಗಿದೆ ಎಂದು ಹೇಳಲಾಗುತ್ತಿದೆ. ಅಯೋಧ್ಯೆ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

ಬಿಹಾರದ ಭೋಜ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (ETV Bharat)

ಪುಣ್ಯಸ್ನಾನ ಮಾಡಲು ತೆರಳಿದ್ದ ಆರು ಮಂದಿ ಸಾವು( ಭೋಜ್​​​​​ಪುರ-ಬಿಹಾರ): ಮತ್ತೊಂದೆಡೆ ಬಿಹಾರದ ಭೋಜ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಆರು ಭಕ್ತರು ಮೃತಪಟ್ಟ ಘಟನೆ ನಡೆದಿದೆ. ಸಂಜಯ್ ಕುಮಾರ್ (62), ಕರುಣಾ ದೇವಿ (58), ಲಾಲ್ ಬಾಬು ಸಿಂಗ್ (25), ಪ್ರಿಯಾ ಕುಮಾರ್ (20), ಆಶಾ ಕಿರಣ್ (28) ಮತ್ತು ಜೂಹಿ ರಾಣಿ (25) ಮೃತರು.

ಬಿಹಾರದ ಭೋಜ್‌ಪುರದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತ (ETV Bharat)

ನಿಯಂತ್ರಣ ಕಳೆದುಕೊಂಡ ಕಾರು ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಭೋಜ್‌ಪುರದ ಜಗದೀಶಪುರ ಪೊಲೀಸ್ ಠಾಣೆ ಪ್ರದೇಶದ ದುಲ್ಹಿಂಗಂಜ್ ಪೆಟ್ರೋಲ್ ಪಂಪ್ ಬಳಿ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಮೃತರೆಲ್ಲರೂ ಪಾಟ್ನಾ ನಿವಾಸಿಗಳೆಂದು ಹೇಳಲಾಗುತ್ತಿದೆ.

ಮೃತರಲ್ಲಿ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದಾರೆ. ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದು, ಮಹಾಕುಂಭದಲ್ಲಿ ಪುಣ್ಯಸ್ನಾನ ಮಾಡಲು ತೆರಳಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ನಾಲ್ವರು ಸಾವು( ಇಟಾ):ಮತ್ತೊಂದೊಡೆ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟ ಘಟನೆ ಇಟಾವಾದಲ್ಲಿ ನಡೆದಿದೆ. ಗುರುವಾರ ರಾತ್ರಿ ಉಸ್ರಹರ್ ಪೊಲೀಸ್ ಠಾಣೆ ವ್ಯಾಪ್ತಿಯ ರುದ್ರಪುರ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ. ಆಶಿಶ್ (17), ಹಿಮಾಂಶು (15), ರಾಹುಲ್ (22), ಪ್ರಾಂಶು (15) ಮತ್ತು ರೋಹಿತ್ (18) ಮೃತರು.

ದೌಲತ್‌ಪುರ ಗ್ರಾಮದ ಐವರು ಉಸ್ರಹರ್ ಪಟ್ಟಣದ ಬಳಿಯ ಅತಿಥಿ ಗೃಹದಲ್ಲಿ ನಡೆದ ಮದುವೆ ಆರತಕ್ಷತೆಯಲ್ಲಿ ಭಾಗವಹಿಸಿ ಮೋಟಾರ್‌ ಸೈಕಲ್‌ನಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ರುದ್ರಪುರ ಗ್ರಾಮದ ಬಳಿ, ಅಪರಿಚಿತ ವಾಹನವೊಂದು ವೇಗವಾಗಿ ಬಂದು ಅವರ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.

ಆಶಿಶ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಾವನ್ನಪ್ಪಿದರೆ, ಹಿಮಾಂಶು, ರಾಹುಲ್ ಮತ್ತು ರೋಹಿತ್ ಸೈಫೈಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವನ್ನಪ್ಪಿದರು. ಪ್ರಾಂಶು ಎಂಬಾತ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ವಾಹನವನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿವೆ ಎಂದು ಸಂಜಯ್ ಕುಮಾರ್ ವರ್ಮಾ ಹೇಳಿದ್ದಾರೆ.

ಇದನ್ನೂ ಓದಿ:ಒಂದೇ ಪ್ರದೇಶದಲ್ಲಿ ಎರಡು ಪ್ರತ್ಯೇಕ ಭೀಕರ ಅಪಘಾತ: 9 ಭಕ್ತರ ದುರ್ಮರಣ - JHARKHAND DELHI 9 DEVOTEES DIED

Last Updated : Feb 21, 2025, 1:34 PM IST

ABOUT THE AUTHOR

...view details