ನವದೆಹಲಿ: ಭಾರತದೊಂದಿಗೆ ಅತ್ಯಂತ ಸ್ನೇಹಪರವಾಗಿ ಇರಬೇಕಾಗಿದ್ದ ಕೆನಡಾ ಭಾರತದ ಬೆನ್ನಿಗೆ ಚೂರಿ ಹಾಕಿದ್ದು, ಅದರ ನಡವಳಿಕೆ ತೀರಾ ನಿರಾಶಾದಾಯಕವಾಗಿದೆ ಎಂದು ಕೆನಡಾದಿಂದ ವಾಪಸು ಕರೆಸಿಕೊಳ್ಳಲಾದ ಭಾರತದ ಹೈಕಮಿಷನರ್ ಸಂಜಯ್ ವರ್ಮಾ ಹೇಳಿದರು.
ಭಾರತವು ಖಲಿಸ್ತಾನಿ ಭಯೋತ್ಪಾದಕ ಎಂದು ಘೋಷಿಸಿರುವ ಕೆನಡಾ ಪ್ರಜೆ ಹರ್ದೀಪ್ ಸಿಂಗ್ ನಿಜ್ಜರ್ ಎಂಬಾತನನ್ನು 2023ರ ಜೂನ್‌ನಲ್ಲಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಯ ತನಿಖೆಯಲ್ಲಿ ವರ್ಮಾ ಅವರು "ಆಸಕ್ತಿಯ ವ್ಯಕ್ತಿ" ಎಂದು ಕೆನಡಾ ಘೋಷಿಸಿತು. ನಂತರದ ಬೆಳವಣಿಗೆಯಲ್ಲಿ, ಕೆನಡಾ ಮುಂದಿನ ಕ್ರಮ ತೆಗೆದುಕೊಳ್ಳುವ ಮೊದಲೇ ನವದೆಹಲಿಯು ವರ್ಮಾ ಮತ್ತು ಇತರ ಐದು ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಂಡಿತು. ಇತರ ರಾಜತಾಂತ್ರಿಕರು ಕೂಡ ಹತ್ಯಾ ಪ್ರಕರಣದಲ್ಲಿ ಆರೋಪಿಗಳು ಎಂದು ಕೆನಡಾ ಹೆಸರಿಸಿದೆ.
"ಇದು ತೀರಾ ನಿರಾಶಾದಾಯಕ. ಇದು ದ್ವಿಪಕ್ಷೀಯ ಸಂಬಂಧದಲ್ಲಿ ತೀರಾ ವೃತ್ತಿಪರವಲ್ಲದ ನಡವಳಿಕೆಯಾಗಿದೆ. ರಾಜತಾಂತ್ರಿಕರ ಬಳಿ ರಾಜತಾಂತ್ರಿಕ ಸಾಧನಗಳು ಲಭ್ಯವಿವೆ. ದೇಶದ ಉನ್ನತ ರಾಯಭಾರಿ ಮತ್ತು ಇತರ ರಾಜತಾಂತ್ರಿಕರನ್ನು ವಿಚಾರಣೆಗೆ ಒಳಪಡಿಸುವ ಬದಲು ತನಿಖೆಗಾಗಿ ಆ ಸಾಧನಗಳನ್ನು ಬಳಸಬಹುದಿತ್ತು" ಎಂದು ವರ್ಮಾ ಬುಧವಾರ ಪಿಟಿಐ ವೀಡಿಯೊ ಸಂದರ್ಶನದಲ್ಲಿ ಹೇಳಿದರು.
ಪಿಟಿಐನ ನವದೆಹಲಿಯ ಸ್ಟುಡಿಯೋದಲ್ಲಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ ವರ್ಮಾ, ಕೆನಡಾದಲ್ಲಿ ಖಲಿಸ್ತಾನಿ ಚಳವಳಿಯ ಉಗಮ, ಚುನಾವಣಾ ಲಾಭಕ್ಕಾಗಿ ಸ್ಥಳೀಯ ರಾಜಕಾರಣಿಗಳಿಂದ ಅದು ಪಡೆಯುತ್ತಿರುವ ಬೆಂಬಲ ಮತ್ತು ಖಲಿಸ್ತಾನಿಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಲು ನಡೆಸುವ ಅಪರಾಧ ಚಟುವಟಿಕೆಗಳ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಂಡರು.