ಚಂಡೀಗಢ: ಪತ್ನಿಯೊಬ್ಬಳು ತನ್ನ ಗಂಡನನ್ನು 'ಹಿಜ್ದಾ' (ತೃತೀಯ ಲಿಂಗಿ) ಎಂದು ಕರೆಯುವುದು ಮಾನಸಿಕ ಕ್ರೌರ್ಯ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ತನ್ನ ಪತಿಯ ಪರವಾಗಿ ಜುಲೈ 12 ರಂದು ಕೌಟುಂಬಿಕ ನ್ಯಾಯಾಲಯವು ನೀಡಿದ ವಿಚ್ಛೇದನ ಆದೇಶದ ವಿರುದ್ಧ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸುಧೀರ್ ಸಿಂಗ್ ಮತ್ತು ಜಸ್ಜಿತ್ ಸಿಂಗ್ ಬೇಡಿ ಅವರ ವಿಭಾಗೀಯ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತನ್ನ ಹೆಂಡತಿ ತನ್ನ ಮಗನನ್ನು 'ಹಿಜ್ಡಾ' ಎಂದು ಮೂದಲಿಸುತ್ತಾಳೆ ಎಂದು ಗಂಡನ ತಾಯಿ ಹೇಳಿಕೆ ನೀಡಿದ್ದರು.
"ಕುಟುಂಬ ನ್ಯಾಯಾಲಯದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳ ಪ್ರಕಾರ ನೋಡಿದರೆ, ಮೇಲ್ಮನವಿದಾರ - ಹೆಂಡತಿಯ ಕೃತ್ಯಗಳು ಮತ್ತು ನಡವಳಿಕೆಗಳು ಕ್ರೌರ್ಯಕ್ಕೆ ಸಮನಾಗಿವೆ ಎಂಬುದು ಕಂಡು ಬರುತ್ತದೆ ಮೊದಲನೆಯದಾಗಿ, ಪ್ರತಿವಾದಿ - ಪತಿಯನ್ನು ಹಿಜ್ಡಾ (ತೃತೀಯ ಲಿಂಗಿ) ಎಂದು ಕರೆಯುವುದು ಮತ್ತು ಆತನ ತಾಯಿಯು ತೃತೀಯ ಲಿಂಗಿಗೆ ಜನ್ಮ ನೀಡಿದ್ದಾಳೆ ಎಂದು ಜರಿಯುವುದು ಕ್ರೌರ್ಯದ ಕೃತ್ಯವಾಗಿದೆ" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪತಿಯ ವಾದವೇನು?:ಸದ್ಯ ವಿಚ್ಛೇದನ ಪಡೆದಿರುವ ಜೋಡಿ ಡಿಸೆಂಬರ್ 2017 ರಲ್ಲಿ ವಿವಾಹವಾಗಿದ್ದರು. ತನ್ನ ಹೆಂಡತಿ ತಡರಾತ್ರಿ ಎದ್ದು, ನೆಲ ಮಹಡಿಯಿಂದ ಮೊದಲ ಮಹಡಿಗೆ ಊಟ ತಂದು ಕೊಡುವಂತೆ ಅನಾರೋಗ್ಯದಿಂದ ಬಳಲುತ್ತಿರುವ ತನ್ನ ತಾಯಿಗೆ ಹೇಳುತ್ತಿದ್ದಳು ಎಂದು ವಿಚ್ಛೇದನ ಅರ್ಜಿಯಲ್ಲಿ ಪತಿ ಉಲ್ಲೇಖಿಸಿದ್ದಾರೆ.
ಪತ್ನಿಯ ಆರೋಪವೇನು?:ತನ್ನೊಂದಿಗೆ ದೈಹಿಕವಾಗಿ ಸಂಪರ್ಕ ಮಾಡಲು ನೀನು ಸದೃಢವಾಗಿಲ್ಲ ಎಂದು ನಿಂದಿಸುತ್ತಿದ್ದ ಪತ್ನಿ, ತಾನು ಬೇರೊಬ್ಬರೊಂದಿಗೆ ಮದುವೆಯಾಗಲು ಬಯಸುವುದಾಗಿ ಹೇಳುತ್ತಿದ್ದಳು ಎಂದು ಪತಿಯ ಅರ್ಜಿಯಲ್ಲಿ ತಿಳಿಸಲಾಗಿದೆ. ಆದರೆ ಪತ್ನಿಯು ಈ ಆರೋಪಗಳನ್ನು ನಿರಾಕರಿಸಿದ್ದು, ಪತಿಯು ತನ್ನನ್ನು ಮನೆಯಿಂದ ಹೊಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.