ಪಶ್ಚಿಮ ಬಂಗಾಳ: "2024ರ ಲೋಕಸಭೆ ಚುನಾವಣೆಗೂ ಮುನ್ನವೇ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬರಲಿದೆ" ಎಂದು ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸುಕಾಂತ ಮಜುಂದಾರ್ ತಿಳಿಸಿದ್ದಾರೆ. "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಗಾಗಲೇ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಾಗಿ ದೇಶದ ಜನರಿಗೆ ಮಾತು ಕೊಟ್ಟಿದ್ದಾರೆ. ಆ ಮಾತಿನಂತೆ ನಡೆದುಕೊಳ್ಳುವ ವಿಶ್ವಾಸವಿದೆ" ಎಂದರು.
"ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಅಧಿಕಾರ ವ್ಯಾಪ್ತಿಗೆ ಸಿಎಎ ಒಳಪಡುವುದಿಲ್ಲ. ಕೇಂದ್ರ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತದೆ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ 31 ಡಿಸೆಂಬರ್ 2014ರ ಅಂತ್ಯದವರೆಗೆ ಭಾರತಕ್ಕೆ ವಲಸೆ ಬಂದ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ರಾಷ್ಟ್ರೀಯತೆಯನ್ನು ಈ ಕಾಯ್ದೆಯಡಿ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ತಿರ್ಮಾನಿಸಿದೆ" ಎಂದು ಹೇಳಿದರು.
ಭಾನುವಾರ ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಚಿವ ಶಾಂತನು ಠಾಕೂರ್, "ಮುಂದಿನ ಏಳು ದಿನಗಳಲ್ಲಿ ದೇಶಾದ್ಯಂತ ಪೌರತ್ವ (ತಿದ್ದುಪಡಿ) ಕಾಯ್ದೆ/ಸಿಎಎ ಜಾರಿಗೆ ಬರಲಿದೆ. ಇದು ಕೇಂದ್ರ ಸರ್ಕಾರದ ಗ್ಯಾರಂಟಿ. ಕೇವಲ ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ, ಭಾರತದ ಪ್ರತಿಯೊಂದು ರಾಜ್ಯದಲ್ಲೂ ಸಿಎಎ ಒಂದು ವಾರದೊಳಗೆ ಜಾರಿಗೆ ಬರಲಿದೆ" ಎಂದು ಹೇಳುವ ಮೂಲಕ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದರು.