ನವದೆಹಲಿ: ಯಾವುದೇ ಔಪಚಾರಿಕ ವಲಯಗಳಲ್ಲಿ ಪ್ರಥಮ ಬಾರಿಗೆ ಕೆಲಸಕ್ಕೆ ಸೇರುವ ವ್ಯಕ್ತಿಗಳಿಗೆ ಮೊದಲ ತಿಂಗಳು 15 ಸಾವಿರ ರೂಪಾಯಿ ಹೆಚ್ಚುವರಿ ಸಂಬಳ ಪಡೆಯಲಿದ್ದಾರೆ ಎಂದು 2024 ರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಉದ್ಯೋಗ ಮತ್ತು ಕೌಶಲ್ಯಕ್ಕಾಗಿ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿ ಈ ಯೋಜನೆ ಘೋಷಿಸಲಾಗಿದೆ.
ನೌಕರರ ಭವಿಷ್ಯ ನಿಧಿ ಸಂಸ್ಥೆಯಲ್ಲಿ (ಇಪಿಎಫ್ಒ) ನೋಂದಾಯಿಸಿಕೊಳ್ಳುವ ಪ್ರಥಮ ಬಾರಿಯ ನೌಕರರಿಗೆ ಮೂರು ಕಂತುಗಳಲ್ಲಿ 15,000 ರೂ.ಗಳವರೆಗೆ ಒಂದು ತಿಂಗಳ ವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಉದ್ಯೋಗ, ಕೌಶಲ್ಯ, ಎಂಎಸ್ಎಂಇಗಳು ಮತ್ತು ಮಧ್ಯಮ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಅವರು ಹೇಳಿದರು. 5 ವರ್ಷಗಳ ಅವಧಿಯಲ್ಲಿ 4.1 ಕೋಟಿ ಯುವಕರಿಗೆ ಉದ್ಯೋಗ ಸೃಷ್ಟಿಸಲು, ಕೌಶಲ್ಯ ಹೆಚ್ಚಿಸಲು ಮತ್ತು ಇತರ ಅವಕಾಶಗಳಿಗಾಗಿ 2 ಲಕ್ಷ ಕೋಟಿ ರೂ.ಗಳ ಕೇಂದ್ರದ ವೆಚ್ಚದೊಂದಿಗೆ 5 ಯೋಜನೆಗಳ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಈ ವರ್ಷದ ಬಜೆಟ್ನಲ್ಲಿ ಶಿಕ್ಷಣ, ಉದ್ಯೋಗ ಮತ್ತು ಕೌಶಲ್ಯ ಉಪಕ್ರಮಗಳಿಗಾಗಿ 1.48 ಲಕ್ಷ ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಅವರು ತಿಳಿಸಿದರು. ಪ್ಯಾಕೇಜ್ನ ಐದು ಯೋಜನೆಗಳಲ್ಲಿ ಮೂರನ್ನು 'ಎಂಪ್ಲಾಯಮೆಂಟ್ ಲಿಂಕ್ಡ್ ಇನ್ಸೆಂಟಿವ್ (ಇಎಲ್ಐ)' ಎಂದು ಟ್ಯಾಗ್ ಮಾಡಲಾಗಿದೆ. ಮೊದಲ ಯೋಜನೆಯು ಮೊದಲ ಬಾರಿಯ ಉದ್ಯೋಗಿಗಳಿಗೆ ಪ್ರಯೋಜನ ನೀಡುತ್ತದೆ ಎಂದು ಹೇಳಲಾಗಿದೆ.