ನವದೆಹಲಿ:ಸಂಸತ್ತು ಅಥವಾ ವಿಧಾನಸಭೆಯಲ್ಲಿ ಮತ ಹಾಕಲು ಅಥವಾ ಭಾಷಣ ಮಾಡಲು ಲಂಚ ಪಡೆಯುವ ಶಾಸಕ ಅಥವಾ ಸಂಸದರಿಗೆ ಕಾನೂನು ಕ್ರಮದಿಂದ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಹತ್ವದ ತೀರ್ಪು ನೀಡಿತು. ಇದರ ಜೊತೆಗೆ 1998ರ ಪಿ.ವಿ.ನರಸಿಂಹರಾವ್ ಪ್ರಕರಣದ ಆದೇಶವನ್ನು ರದ್ದು ಮಾಡಿದೆ.
ಸಂಸದರು ಅಥವಾ ಶಾಸಕರು ಭಾಷಣ ಮತ್ತು ಮತ ಹಾಕಲು ಲಂಚ ಪಡೆಯುವುದಕ್ಕೆ ಜನಪ್ರತಿನಿಧಿಗಳ ವಿಶೇಷ ಹಕ್ಕು ಅನ್ವಯಿಸುದಿಲ್ಲ. 1998ರ ಪಿ.ವಿ.ನರಸಿಂಹರಾವ್ ಪ್ರಕರಣ ತೀರ್ಪು ಸಂವಿಧಾನದ 105 ಅಥವಾ 194ನೇ ವಿಧಿಯ ವಿರುದ್ಧವಾಗಿದೆ. ಹೀಗಾಗಿ ಅಂದಿನ ತೀರ್ಪನ್ನು ಸರ್ವಾನುಮತದಿಂದ ರದ್ದು ಮಾಡಲಾಗುತ್ತಿದೆ ಎಂದು ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಏಳು ಸದಸ್ಯರ ಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಭ್ರಷ್ಟಾಚಾರ ಮತ್ತು ಶಾಸಕರ ಲಂಚ ಪಡೆಯುವುದು ದೇಶದ ಸಂಸದೀಯ ಪ್ರಜಾಪ್ರಭುತ್ವವನ್ನೇ ನಾಶಪಡಿಸುತ್ತದೆ. ಇದು ಸಂವಿಧಾನ ವಿರೋಧಿ ನಡೆ. ಲಂಚ ಪಡೆಯುವ ಮೂಲಕ ಸದಸ್ಯರು ಕ್ರಿಮಿನಲ್ ಅಪರಾಧದಲ್ಲಿ ತೊಡಗುತ್ತಾರೆ. ಮತ ಚಲಾಯಿಸಲು ಅಥವಾ ಶಾಸಕಾಂಗದಲ್ಲಿ ಭಾಷಣ ಮಾಡಲು ಹಣ ಪಡೆಯುವುದು ಅಪರಾಧ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಪ್ರಜಾಪ್ರಭುತ್ವಕ್ಕೆ ಮಾರಕ:ಲಂಚಕ್ಕೆ ಸಂಸದೀಯ ಸವಲತ್ತುಗಳಿಂದ ರಕ್ಷಣೆ ಇರಬಾರದು. ಅದು ರಾಷ್ಟ್ರದ ಸ್ವಾಸ್ಥ್ಯಕ್ಕೆ ಮಾರಕ. ಪ್ರಜಾಪ್ರಭುತ್ವದ ತಳಹದಿಯನ್ನೇ ಬುಡಮೇಲು ಮಾಡುತ್ತದೆ. ಅಂದಿನ ತೀರ್ಪಿನಲ್ಲಿ ಭಾಷಣ ಮತ್ತು ಮತ ಹಾಕಲು ಜನಪ್ರತಿನಿಧಿಗಳಿಗೆ ವಿನಾಯಿತಿ ನೀಡಿದ ಆದೇಶ ಕಾನೂನುಬಾಹಿರವಾಗಿದೆ. ಅದನ್ನು ರದ್ದು ಮಾಡಲಾಗಿದೆ ಎಂದು ಕೋರ್ಟ್ ತೀರ್ಪಿತ್ತಿದೆ.