ಕರ್ನಾಟಕ

karnataka

ETV Bharat / bharat

ಹುಲಿಯೊಂದಿಗೆ ಸೆಣಸಾಡಿ ಪತಿಯ ಜೀವ ಉಳಿಸಿದ ಪತ್ನಿ! - TELANGANA TIGER ATTACK

ಪತ್ನಿ ಹುಲಿಯೊಂದಿಗೆ ಸೆಣಸಿ ತನ್ನ ಪತಿಯ ಜೀವ ಉಳಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

Brave Woman Wrestles With Tiger To Save Husband In Telangana
ಹುಲಿ ದಾಳಿಯಿಂದ ತನ್ನ ಪತಿಯ ಜೀವ ಉಳಿಸಿದ ಧೈರ್ಯಶಾಲಿ ಮಹಿಳೆ ಸುಜಾತಾ (ETV Bharat)

By ETV Bharat Karnataka Team

Published : Dec 2, 2024, 3:19 PM IST

ಆಸಿಫಾಬಾದ್(ತೆಲಂಗಾಣ): ಮಹಿಳೆಯೊಬ್ಬಳು ತನ್ನ ಪ್ರಾಣ ಪಣಕ್ಕಿಟ್ಟು ಹುಲಿ ದಾಳಿಯಿಂದ ತನ್ನ ಪತಿಯನ್ನು ರಕ್ಷಿಸಿದ ಘಟನೆ ತೆಲಂಗಾಣದ ಆಸಿಫಾಬಾದ್​ನ ಸಿರ್ಪುರ (ಟಿ) ಮಂಡಲದ ದುಬ್ಬಗುಡ ಎಂಬ ಗ್ರಾಮದಲ್ಲಿ ನಡೆದಿದೆ.

ಸುಜಾತಾ ಇಂಥದ್ದೊಂದು ಸಾಹಸ ತೋರಿದ ರೈತ ಮಹಿಳೆ. ಇವರ ಪತಿ ಸುರೇಶ್ ಹುಲಿ ದಾಳಿಗೆ ಸಿಲುಕಿದ್ದರು. ಈ ಸಂದರ್ಭದಲ್ಲಿ ಸುಜಾತಾ ತನ್ನ ಪ್ರಾಣವನ್ನು ಲೆಕ್ಕಿಸದೇ ಹೋರಾಡಿ ಆತನ ಪ್ರಾಣ ಉಳಿಸಿದ್ದಾರೆ. ಆಕೆಯ ಧೈರ್ಯ ಮತ್ತು ಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಏನಾಯ್ತು?: ಶನಿವಾರ ಬೆಳಗ್ಗೆ ಸುಜಾತಾ ತಮ್ಮ ಹೊಲದಲ್ಲಿ ಹತ್ತಿ ಬಿಡಿಸುತ್ತಿದ್ದರು. ಹುಲಿ ಅವಿತುಕೊಂಡಿರುವುದನ್ನು ಅರಿಯದ ಪತಿ ಸುರೇಶ್ ಎತ್ತಿನ ಗಾಡಿಯೊಂದಿಗೆ ಬರುತ್ತಿದ್ದರು. ಹತ್ತಿರ ಬರುತ್ತಿದ್ದಂತೆಯೇ ಹುಲಿ ಮೇಲೆರಗಿದೆ. ಕುತ್ತಿಗೆಗೆ ಪರಚಿದೆ. ಸ್ವಲ್ಪ ದೂರದಲ್ಲಿದ್ದ ಸುಜಾತಾ ಓಡಿ ಬಂದು ಪಕ್ಕದಲ್ಲಿ ಬಿದ್ದಿದ್ದ ಕಲ್ಲು ಮತ್ತು ಕೋಲು ಹಿಡಿದು ಜೋರಾಗಿ ಕೂಗುತ್ತಾ ಹುಲಿಯನ್ನು ಹಿಮ್ಮೆಟ್ಟಿಸಿದ್ದಾರೆ. ಹುಲಿ ಉಗುರುಗಳಿಂದ ಪರಚಿದ್ದರಿಂದ ಸುರೇಶ್ ಅವರ ಎದೆಗೆ ಗಾಯವಾಗಿದೆ. ನೆರೆಹೊರೆ ರೈತರ ನೆರವಿನಿಂದ ಸುಜಾತಾ ತನ್ನ ಪತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

"ಹುಲಿ ದಾಳಿ ಮಾಡಿದಾಗ ನಾನು ನನ್ನ ಪ್ರಾಣದ ಬಗ್ಗೆ ಯೋಚಿಸಲಿಲ್ಲ. ನಾನು ಗಂಡನನ್ನು ಉಳಿಸುವ ಬಗ್ಗೆ ಮಾತ್ರ ಯೋಚಿಸಿದೆ. ಅರೆಕ್ಷಣ ಹಿಂಜರಿದಿದ್ದರೂ ಗಂಡನನ್ನು ಕಳೆದುಕೊಳ್ಳಬೇಕಾಗಿತ್ತು" ಎಂದು ಸುಜಾತಾ ಹೇಳಿದರು.

ಪತ್ನಿಯ ಕೆಚ್ಚೆದೆಯ ಧೈರ್ಯದಿಂದ ಪತಿಯ ಜೀವ ಉಳಿಯಿತೆಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಸುಜಾತಾ ಅವರ ಪತಿಧರ್ಮವನ್ನು ಗುಣಗಾಣ ಮಾಡುತ್ತಾ ಪೌರಾಣಿಕ ಸಾಹಸಮಯ ಕಥೆಗಳಿಗೂ ಹೋಲಿಸುತ್ತಿದ್ದಾರೆ.

ಶುಕ್ರವಾರ 21 ವರ್ಷದ ಮಹಿಳೆ ಹುಲಿ ದಾಳಿಯಿಂದ ಮೃತಪಟ್ಟ ಘಟನೆ ನಡೆದಿತ್ತು. ಇದಾಗಿ ಒಂದು ದಿನದ ನಂತರ ಈ ಘಟನೆ ನಡೆದಿದೆ.

ಹುಲಿ ದಾಳಿ ಘಟನೆಗಳು ಆಸಿಫಾಬಾದ್ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ. ನರಭಕ್ಷಕ ಹುಲಿಯನ್ನು ಸೆರೆ ಹಿಡಿಯುವಂತೆ ರೈತರು ಒತ್ತಾಯಿಸುತ್ತಿದ್ದಾರೆ.

ಈ ನಡುವೆ ಹುಲಿ ಪತ್ತೆಗೆ ಅರಣ್ಯ ಇಲಾಖೆ ಶೋಧ ಕಾರ್ಯಾರಂಭಿಸಿದೆ. ಕಾಗಜನಗರ ಮಂಡಲದ ವೆಂಪಲ್ಲಿ ಅರಣ್ಯ ವಿಭಾಗದಲ್ಲಿ ಡ್ರೋನ್‌ಗಳ ಮೂಲಕ ಶೋಧ ನಡೆಸುತ್ತಿದೆ. ಇದೇ ವೇಳೆ, ಸಮೀಪದ ಅರಣ್ಯ ಪ್ರದೇಶಗಳಿಗೆ ತೆರಳುವಾಗ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸ್ಥಳೀಯರಿಗೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ಹಾಡಹಗಲೇ ಗ್ರಾಮಕ್ಕೆ ನುಗ್ಗಿ ಮನೆಯ ಛಾವಣಿ ಧ್ವಂಸಗೊಳಿಸಿದ ಸಲಗ: ವಿಡಿಯೋ

ABOUT THE AUTHOR

...view details