ಬೆಂಗಳೂರು: ನಗರದ ರಾಜಾಜಿನಗರ ಹಾಗೂ ವಸಂತಪುರದಲ್ಲಿರುವ ಇಸ್ಕಾನ್ ದೇವಾಲಯಗಳಲ್ಲಿ ಇಂದು ಲಕ್ಷಾಂತರ ಭಕ್ತರು ವೈಕುಂಠ ಏಕಾದಶಿ ಉತ್ಸವ ಆಚರಿಸಿದರು. ದೇವಸ್ಥಾನಗಳನ್ನು ಬಣ್ಣಬಣ್ಣದ ಪರಿಮಳಯುಕ್ತ ಹೂವುಗಳಿಂದ ಅಲಂಕರಿಸಲಾಗಿತ್ತು. ರಂಗುರಂಗಿನ ತೋರಣಗಳು ಮತ್ತು ದೀಪಾಲಂಕಾರಗಳು ವೈಕುಂಠ ಏಕಾದಶಿಯ ಉತ್ಸಾಹವನ್ನು ಇಮ್ಮಡಿಗೊಳಿಸಿದ್ದವು.
ಮುಂಜಾನೆ 3 ಘಂಟೆಗೆ ಹರೇಕೃಷ್ಣ ಗಿರಿಯ ಶ್ರೀನಿವಾಸ ಗೋವಿಂದ ದೇವರ ಹಾಗೂ ವೈಕುಂಠ ಗಿರಿಯ ರಾಜಾಧಿರಾಜ ಗೋವಿಂದ ದೇವರ ಸುಪ್ರಭಾತ ಸೇವೆಯೊಂದಿಗೆ ಪೂಜೆಗಳು ಪ್ರಾರಂಭವಾದವು. ಬಳಿಕ ಮೂಲವಿಗ್ರಹಗಳಿಗೆ ಪಂಚಾಮೃತ, ಪಂಚಗವ್ಯ, ಹಣ್ಣಿನರಸಗಳು ಮುಂತಾದ ಮಂಗಳಕರ ದ್ರವ್ಯಗಳನ್ನೊಳಗೊಂಡ ವೈಭವೋಪೇತ ಅಭಿಷೇಕವನ್ನು ನೆರವೇರಿಸಲಾಯಿತು. ನಂತರ ದೇವರುಗಳನ್ನು ನವವಸ್ತ್ರಗಳು, ಒಡವೆಗಳು ಮತ್ತು ಪರಿಮಳಯುಕ್ತ ರಂಗುರಂಗಿನ ಪುಷ್ಪಮಾಲೆಗಳಿಂದ ಸಿಂಗರಿಸಲಾಯಿತು.
ಶ್ರೀ ರಾಧಾಕೃಷ್ಣಚಂದ್ರರ ಉತ್ಸವ ವಿಗ್ರಹಗಳು, ಅನಂತಶೇಷನ ಮೇಲೆ ಆಸೀನರಾದ ಲಕ್ಷ್ಮಿನಾರಾಯಣರ ರೂಪದಲ್ಲಿ, ಹರೇಕೃಷ್ಣ ಗಿರಿಯ ವೈಕುಂಠದ್ವಾರವನ್ನು ಅಲಂಕರಿಸಿದ್ದವು. ಇನ್ನು ವೈಕುಂಠಗಿರಿಯಲ್ಲಿ, ಶ್ರೀ ರಾಜಗೋಪಾಲ ಸ್ವಾಮಿ, ರುಕ್ಮಿಣಿ ಮತ್ತು ಸತ್ಯಭಾಮೆಯರು ವೈಕುಂಠದ್ವಾರವನ್ನು ಅಲಂಕರಿಸಿದ್ದವು. ಲಕ್ಷಾರ್ಚನೆ ಸೇವೆ, ಕುಂಕುಮಾರ್ಚನೆ ಮತ್ತು ಕಲ್ಯಾಣೋತ್ಸವಗಳು ಉತ್ಸವದ ಪ್ರಮುಖ ಆಕರ್ಷಣೆಗಳಾಗಿದ್ದವು. ಏಕಾಂತಸೇವೆ ಮತ್ತು ಮಹಾಮಂಗಳಾರತಿಗಳೊಂದಿಗೆ ವೈಕುಂಠ ಏಕಾದಶಿಯ ಪರ್ವ ಪರಿಸಮಾಪ್ತಿಗೊಂಡಿತು.
ಪ್ರಮುಖ ನಾಯಕರಿಂದ ವೈಕುಂಠದ್ವಾರ ಪ್ರವೇಶ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ, ಆರ್.ವಿ. ದೇಶಪಾಂಡೆ, ಕೆ. ಎಚ್. ಮುನಿಯಪ್ಪ, ಡಾ. ಅಶ್ವತ್ಥ ನಾರಾಯಣ್, ಗೋಪಾಲಯ್ಯ, ಸಿನಿ ತಾರೆಯಾರಾದ ರಮೇಶ್ ಅರವಿಂದ್, ಪ್ರಿಯಾಂಕ ಉಪೇಂದ್ರ, ಜಗ್ಗೇಶ್ ಇನ್ನಿತರ ಗಣ್ಯವ್ಯಕ್ತಿಗಳು ಈ ಶುಭಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ, ವೈಕುಂಠದ್ವಾರ ಪ್ರವೇಶ ಮಾಡಿ, ಭಗವಂತನ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ, ಜನಪ್ರಿಯ ಗಾಯಕಿ ಮೇಧಾ ವಿದ್ಯಾಭೂಷಣ ಮತ್ತು ಸೂರ್ಯಗಾಯತ್ರಿಯ ಅವರ ವಿಶೇಷ ಸಂಗೀತ ಸೇವೆ ಕಾರ್ಯಕ್ರಮ ನಡೆಯಿತು.
ಎಲ್ಲರಿಗೂ ಪ್ರಸಾದ ವಿತರಣೆ: ಇನ್ನು ವೈಕುಂಠ ಏಕಾದಶಿಯ ಈ ಶುಭ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿದ ಎಲ್ಲ ಭಕ್ತರಿಗೂ ಪ್ರಸಾದ ವಿತರಣೆ ಮಾಡಲಾಯಿತು. ವೈಕುಂಠ ಏಕಾದಶಿಯ ಪ್ರಯುಕ್ತ ತಯಾರಿಸಲಾದ ವಿಶೇಷ ಲಡ್ಡುಗಳನ್ನು ಸಹ ದಿನವಿಡೀ ವಿತರಿಸಲಾಯಿತು. ಸರತಿ ಸಾಲು, ಪಾದುಕ ಸೇವೆ, ಕುಡಿಯುವ ನೀರು ಮುಂತಾದ ಜನಸ್ನೇಹಿ ವ್ಯವಸ್ಥೆಗಳನ್ನು ಭಕ್ತರಿಗೆ ಮಾಡಲಾಗಿತ್ತು.
ಇಸ್ಕಾನ್ ಬೆಂಗಳೂರಿನ ಅಧ್ಯಕ್ಷ ಮಧುಪಂಡಿತ ದಾಸರು ಮಾತನಾಡಿ, "ವೈಕುಂಠ ಏಕಾದಶಿಯ ಶುಭಸಂದರ್ಭದಲ್ಲಿ, ಹರೇಕೃಷ್ಣ ಗಿರಿ ಮತ್ತು ವೈಕುಂಠ ಗಿರಿಯ ನಮ್ಮ ದೇವಸ್ಥಾನಗಳಿಗೆ ನಗರದ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಿರುವುದನ್ನು ಕಂಡು ಬಹು ಸಂತಸವಾಗಿದೆ. ವೈಕುಂಠದ್ವಾರ ಪ್ರವೇಶ ಮಾಡಿ, ಭಗವಂತನ ದರ್ಶನವನ್ನು ಪಡೆದ ಅವರೆಲ್ಲರೂ ತುಂಬಾ ಅದೃಷ್ಟವಂತರು. ಶ್ರೀನಿವಾಸ ಗೋವಿಂದನು ಅವರೆಲ್ಲರಿಗೆ ಶಾಂತಿ, ಸಂತೋಷ ಮತ್ತು ಭಕ್ತಿಗಳಿಂದ ತುಂಬಿದ ಸಂವತ್ಸರವನ್ನು ಅನುಗ್ರಹಿಸಲಿ" ಎಂದರು.
ಇದನ್ನೂ ಓದಿ: ಮಲೆನಾಡಲ್ಲಿ ವೈಕುಂಠ ಏಕಾದಶಿಯ ಸಂಭ್ರಮ: ಲಕ್ಷ್ಮಿ ವೆಂಕಟೇಶನ ದರ್ಶನ ಪಡೆದ ಭಕ್ತರು
ಇದನ್ನೂ ಓದಿ: ವೈಕುಂಠ ಏಕಾದಶಿ: ಮಧ್ಯರಂಗನಾಥ ಸ್ವಾಮಿ ದೇವಾಲಯಕ್ಕೆ ಭಕ್ತಸಾಗರ; ಕಾಡು ನಾರಾಯಣನಿಗೆ ಸಪ್ತದ್ವಾರ ನಿರ್ಮಾಣ