ಮುಂಬೈ: ಮುಂಬೈನಲ್ಲಿ ಶನಿವಾರ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ತಮ್ಮ ಹಲವಾರು ಸಾಮಾಜಿಕ ಕಾರ್ಯಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದರು. ಮುಂಬೈನ ಬಾಲಿವುಡ್ ವಲಯದಲ್ಲಿಯೂ ಜನಪ್ರಿಯ ವ್ಯಕ್ತಿಯಾಗಿದ್ದ ಅವರು ಕೋವಿಡ್ ಅಲೆಯ ಸಮಯದಲ್ಲಿ ರೋಗಿಗಳಿಗೆ ಜೀವ ರಕ್ಷಕ ಔಷಧಿಗಳನ್ನು ಪೂರೈಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಕೋವಿಡ್ ಅಲೆ ಅತ್ಯಂತ ತೀವ್ರವಾಗಿರುವಾಗ ರೋಗಿಗಳಿಗೆ ಬೇಕಾದ ಔಷಧಿಗಳನ್ನು ವ್ಯವಸ್ಥೆ ಮಾಡಿದ್ದರು.
ಸಲ್ಮಾನ್, ಶಾರುಖ್‌ಗೆ ಆಪ್ತ: ಸಿದ್ದಿಕಿ ಭವ್ಯ ಇಫ್ತಾರ್ ಕೂಟಗಳನ್ನು ಏರ್ಪಡಿಸುವುದಕ್ಕೂ ಹೆಸರುವಾಸಿಯಾಗಿದ್ದರು. ಇವರ ಇಫ್ತಾರ್ ಪಾರ್ಟಿಗಳಲ್ಲಿ ಬಾಲಿವುಡ್‌ನ ಉನ್ನತ ತಾರೆಯರು ಭಾಗವಹಿಸುತ್ತಿದ್ದರು. ಬಾಬಾ ಸಿದ್ದಿಕಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಾಂದ್ರಾ (ಪಶ್ಚಿಮ) ಸ್ಥಾನವನ್ನು ಮೂರು ಬಾರಿ ಪ್ರತಿನಿಧಿಸಿದ್ದರು. ಮುಂಬೈನ ಪ್ರಮುಖ ಮುಸ್ಲಿಂ ನಾಯಕರಾಗಿದ್ದ ಅವರು ಸಲ್ಮಾನ್ ಖಾನ್, ಶಾರುಖ್ ಖಾನ್ ಮತ್ತು ಸಂಜಯ್ ದತ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರಿಗೆ ಆಪ್ತರಾಗಿದ್ದರು.
ಅವರ ಪುತ್ರ ಝೀಶಾನ್ ಸಿದ್ದಿಕಿ ಪ್ರಸ್ತುತ ಮುಂಬೈನ ಕಾಂಗ್ರೆಸ್ ಶಾಸಕರಾಗಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ಕಾಂಗ್ರೆಸ್ ತೊರೆದು ಎನ್ಸಿಪಿಗೆ ಸೇರಿದ್ದ ಸಿದ್ದಿಕಿ, ಕಾಂಗ್ರೆಸ್ ತೊರೆಯಲು ಕಾರಣವೇನೆಂಬುದನ್ನು ಬಹಿರಂಗಪಡಿಸಿರಲಿಲ್ಲ.
ಎನ್ಸಿಪಿಗೆ ಸೇರುವ ಮೂಲಕ ಸಿದ್ದಿಕಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಗೆ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ದೊಡ್ಡ ಮಟ್ಟದ ರಾಜಕೀಯ ಬಲ ತುಂಬಿದ್ದರು. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಗೆ ಮುಂಬೈನಲ್ಲಿ ವಿಶೇಷವಾಗಿ ಮುಸ್ಲಿಂ ಪ್ರಾಬಲ್ಯದ ವಾರ್ಡ್ಗಳಲ್ಲಿ ಎನ್‌ಸಿಪಿ ಪಕ್ಷವನ್ನು ಬಲಪಡಿಸುವಲ್ಲಿ ಸಿದ್ದಿಕಿ ಪ್ರಮುಖ ಪಾತ್ರ ವಹಿಸಿದ್ದಾರೆ.