ನವದೆಹಲಿ:ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆ 86ಕ್ಕೆ ಇಳಿಕೆ ಕಂಡಿದೆ. ಲೋಕಸಭೆ ಚುನಾವಣೆಯಲ್ಲಿ ಹಲವರು ಆಯ್ಕೆಯಾದ ಬಳಿಕ ಮೇಲ್ಮನೆಗೆ ರಾಜೀನಾಮೆ ನೀಡಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಪಕ್ಷದ ಬಲ 90 ಸ್ಥಾನಕ್ಕಿಂತ ಕಡಿಮೆಯಾಗಿದೆ.
ರಾಜ್ಯಸಭೆಯ ಪ್ರಸ್ತುತ ಸಂಖ್ಯಾಬಲ 226 ಆಗಿದ್ದು, ಅದರಲ್ಲಿ ಬಿಜೆಪಿ 86, ಕಾಂಗ್ರೆಸ್ 26 ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) 13 ಸ್ಥಾನಗಳನ್ನು ಹೊಂದಿವೆ. ಸದ್ಯ 19 ಸ್ಥಾನಗಳು ಖಾಲಿ ಇವೆ. ಇದರಲ್ಲಿ 4 ಜನರನ್ನು ರಾಷ್ಟ್ರಪತಿಗಳು ನೇರವಾಗಿ ಆಯ್ಕೆ ಮಾಡುತ್ತಾರೆ. ಇನ್ನು 4 ಸ್ಥಾನಗಳು ಜಮ್ಮು- ಕಾಶ್ಮೀರಕ್ಕೆ ಸೇರಿದ್ದಾಗಿವೆ. ಕಾಶ್ಮೀರ ಸದ್ಯ ರಾಜ್ಯ ಸ್ಥಾನಮಾನ ಹೊಂದಿಲ್ಲದ ಕಾರಣ, ಚುನಾವಣೆ ನಡೆಯುತ್ತಿಲ್ಲ. ಹೀಗಾಗಿ 11 ಸ್ಥಾನಗಳಿಗೆ ಮಾತ್ರ ಚುನಾವಣಾ ಆಯೋಗ ಶೀಘ್ರವೇ ಚುನಾವಣೆ ನಡೆಸಬೇಕಿದೆ.
ಬಿಜೆಪಿಗೆ ಸೀಟು ಹೆಚ್ಚುವ ಭರವಸೆ:ರಾಜ್ಯಸಭೆಯಲ್ಲಿ ಬಿಜೆಪಿಯ ಸ್ಥಾನಗಳು ಸದ್ಯ ಇಳಿದರೂ, ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಯಲ್ಲಿ ಗೆಲುವು ಸಾಧಿಸುವ ಭರವಸೆ ಇದೆ. ಹಲವು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಕಾರಣ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಬಗ್ಗೆ ಪಕ್ಷ ಯೋಜನೆ ರೂಪಿಸಿದೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಬಿಹಾರ, ಮಹಾರಾಷ್ಟ್ರ ಮತ್ತು ಅಸ್ಸಾಂನಲ್ಲಿ ತಲಾ ಎರಡು ಮತ್ತು ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ತ್ರಿಪುರದಲ್ಲಿ ತಲಾ ಒಂದು ಸ್ಥಾನಗಳನ್ನು ಗೆಲ್ಲುವ ವಿಶ್ವಾಸದಲ್ಲಿದೆ. ನಾಲ್ಕು ನಾಮನಿರ್ದೇಶಿತ ಸದಸ್ಯರನ್ನು ಹೊಸದಾಗಿ ನೇಮಿಸಬೇಕಿದೆ. ಸಹಜವಾಗಿ ನಾಮನಿರ್ದೇಶಿತ ಸದಸ್ಯರು ಸದನದಲ್ಲಿ ಸ್ವತಂತ್ರರಾಗಿದ್ದರೂ, ಸಾಂಪ್ರದಾಯಿಕವಾಗಿ ತಮ್ಮನ್ನು ಆಯ್ಕೆ ಮಾಡುವ ಸರ್ಕಾರವನ್ನು ಬೆಂಬಲಿಸುತ್ತಾರೆ. ಹೀಗಾಗಿ ಸರ್ಕಾರಕ್ಕೆ ಮೇಲ್ಮನೆಯಲ್ಲಿ ಸಹಜವಾಗಿ ಬಹುಮತವಿರಲಿದೆ.