ನವದೆಹಲಿ:ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಸಚಿವೆ ಅತಿಶಿ ಅವರಿಗೆ ನೋಟಿಸ್ ನೀಡಿದ ಪೊಲೀಸ್ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ಡೆಲಿವರಿ ಬಾಯ್, ಪೋಸ್ಟ್ಮನ್ಗಳ ರೀತಿ ಬಳಸಿಕೊಳ್ಳುತ್ತಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಆಪರೇಷನ್ ಕಮಲ 2.0 ಆರೋಪ ಮಾಡಿದ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಹಣಕಾಸು ಸಚಿವೆ ಅತಿಶಿ ಅವರಿಗೆ ದೆಹಲಿ ಪೊಲೀಸರು ಮಾಹಿತಿ ನೀಡುವಂತೆ ನೋಟಿಸ್ ಕೊಟ್ಟಿದ್ದಾರೆ. ಇದನ್ನು ಟೀಕಿಸಿರುವ ಆಪ್, ದೆಹಲಿ ಪೊಲೀಸರ ಬಗ್ಗೆ ಅನುಕಂಪವಿದೆ. ಭದ್ರತೆಯ ಕೆಲಸ ಮಾಡಬೇಕಿದ್ದ ಪೊಲೀಸರು, ಡೆಲಿವರಿ ಬಾಯ್ಗಳಂತೆ ಮನೆಗೆ ಬಂದು ನೋಟಿಸ್ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದೆ.
ಪೊಲೀಸರಿಂದ ಪೋಸ್ಟ್‌ಮನ್ ಕೆಲಸ:ದೆಹಲಿ ಪೊಲೀಸ್ ಅಧಿಕಾರಿಗಳ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ ಎಎಪಿ ನಾಯಕ ಜಾಸ್ಮಿನ್ ಶಾ, ದೆಹಲಿ ಪೊಲೀಸ್ ಅಪರಾಧ ವಿಭಾಗದ ತಂಡವು ಶನಿವಾರ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ಬಂದಿತ್ತು. ಅವರು ತಂದಿದ್ದ ನೋಟಿಸ್ನಲ್ಲಿ ಎಫ್ಐಆರ್ ಬಗ್ಗೆ ಮಾಹಿತಿ ಇರಲಿಲ್ಲ. ಇದು ಸಮನ್ಸೇ ಅಥವಾ ಪ್ರಾಥಮಿಕ ವಿಚಾರಣೆಗೆ ನೀಡಿದ ಎಚ್ಚರಿಕೆ ಪತ್ರವೇ? ಎಂಬುದನ್ನು ತಿಳಿಸಿಲ್ಲ. ಐಪಿಸಿಯ ಯಾವುದೇ ಸೆಕ್ಷನ್ ಅದನ್ನು ಅದರಲ್ಲಿ ಉಲ್ಲೇಖಿಸಿಲ್ಲ. ಯಾವುದೇ ಕಾನೂನು ಆಧಾರವಿಲ್ಲದೆ ಕ್ರೈಂ ಬ್ರಾಂಚ್ ಅಧಿಕಾರಿಗಳು ಸಿಎಂಗೆ ನೋಟಿಸ್ ನೀಡಿದ್ದಾರೆ. 5 ಗಂಟೆ ಕಾಲ ಸಿಎಂ ನಿವಾಸದ ಮುಂದೆ ಕಾದಿದ್ದಾರೆ. ಇದು ಒಂದು ರೀತಿ ಡೆಲಿವರಿ ಬಾಯ್‌ಗಳು, ಪೋಸ್ಟ್ಮನ್ಗಳ ಕೆಲಸದಂತಿದೆ ಎಂದು ಛೇಡಿಸಿದೆ.