ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ - BJP CANDIDATES FIRST LIST

ತೀವ್ರ ಕುತೂಹಲ ಮೂಡಿಸಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ.

99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ
99 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ (ETV Bharat)

By ETV Bharat Karnataka Team

Published : Oct 20, 2024, 4:22 PM IST

ಮುಂಬೈ (ಮಹಾರಾಷ್ಟ್ರ):ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎನ್​ಡಿಎ ಮತ್ತು ಇಂಡಿಯಾ ಕೂಟಗಳ ನಡುವೆ ಬಿರುಸಿನ ಸ್ಪರ್ಧೆ ಏರ್ಪಟ್ಟಿದೆ. ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು, ಬಿಜೆಪಿ ತನ್ನ 99 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಅವರು ನಾಗ್ಪುರದ ಸೌಥ್​ ವೆಸ್ಟ್​​ನಿಂದ ಕಣಕ್ಕಿಳಿಯಲಿದ್ದಾರೆ. ವಿಧಾನಸಭೆಯ 288 ಸ್ಥಾನಗಳ ಪೈಕಿ ಬಿಜೆಪಿ 151 ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಉಳಿದ ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳು ಸ್ಪರ್ಧೆ ಮಾಡಲಿವೆ.

ಇಂದು ಪ್ರಕಟವಾದ ಮೊದಲ ಪಟ್ಟಿಯಲ್ಲಿ ರಾಜ್ಯ ಬಿಜೆಪಿ ಮುಖ್ಯಸ್ಥರಾಗಿರುವ ಚಂದ್ರಶೇಖರ್ ಬವಾಂಕುಲೆ ಕಮ್ತಿ ಕ್ಷೇತ್ರದಿಂದ, ಸಚಿವ ಗಿರೀಶ್ ಮಹಾಜನ್ ಜಾಮ್ನೇರ್‌ನಿಂದ, ಸಚಿವ ಸುಧೀರ್ ಮುಂಗಂತಿವಾರ್ ಬಲ್ಲಾರ್‌ಪುರದಿಂದ, ಶ್ರೀಜಯ ಅಶೋಕ್ ಚವಾಣ್ ಭೋಕರ್‌ನಿಂದ, ಆಶಿಶ್ ಶೇಲಾರ್ ವಂಡ್ರೆ ವೆಸ್ಟ್‌ನಿಂದ, ಮಂಗಲ್ ಪ್ರಭಾತ್ ಲೋಧಾ ಮಲಬಾರ್ ಹಿಲ್‌ನಿಂದ ಸ್ಪರ್ಧಿಸಲಿದ್ದಾರೆ. ಕೊಲಾಬಾದಿಂದ ರಾಹುಲ್ ನಾರ್ವೇಕರ್, ಸತಾರಾದಿಂದ ಛತ್ರಪತಿ ಶಿವೇಂದ್ರ ರಾಜೇ ಭೋಸಲೆ ಅವರು ಸ್ಪರ್ಧೆ ಮಾಡಲಿದ್ದಾರೆ.

ಏಕಹಂತದಲ್ಲಿ ಮತದಾನ:288 ಸ್ಥಾನಗಳ ವಿಧಾನಸಭೆಗೆ ನವೆಂಬರ್​ 20 ರಂದು ಒಂದೇ ಹಂತದಲ್ಲಿ ಮತದಾನ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಅಕ್ಟೋಬರ್ 22 ರಂದು ಗೆಜೆಟ್ ನೋಟಿಫಿಕೇಷನ್ ಆಗಲಿದೆ. ಅ.29 ನಾಮಿನೇಷನ್ ಸಲ್ಲಿಕೆಗೆ ಕೊನೆ ದಿನ. ನಾಮಪತ್ರ ಹಿಂಪಡೆಯಲು ನ.4 ಕೊನೆ ದಿನವಾಗಿದ್ದರೆ, ನ.23ರಂದು ಫಲಿತಾಂಶ ಪ್ರಕಟವಾಗಲಿದೆ.

ಸದ್ಯ ಬಿಜೆಪಿ, ಶಿವಸೇನೆ ಮತ್ತು ಎನ್​ಸಿಪಿಯ ಮಹಾಯುತಿ ಮೈತ್ರಿ ಆಡಳಿತದಲ್ಲಿದೆ ಮತ್ತು ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್, ಶಿವಸೇನಾ (ಯುಬಿಟಿ), ಎನ್​ಸಿಪಿ (ಶರದ್ ಪವಾರ)ಯ ಮಹಾವಿಕಾಸ್ ಅಘಾಡಿ ಮೈತ್ರಿ ಮಧ್ಯೆ ತೀವ್ರ ಪೈಪೋಟಿ ಎದುರಾಗಲಿದೆ.

ಇದನ್ನೂ ಓದಿ:ಜಾರ್ಖಂಡ್​, ಮಹಾರಾಷ್ಟ್ರ ಚುನಾವಣೆಗೆ ಆಪ್‌ ಸ್ಪರ್ಧೆ ಡೌಟ್‌: 'ಇಂಡಿಯಾ' ಬೆಂಬಲಿಸುವ ಸಾಧ್ಯತೆ

ABOUT THE AUTHOR

...view details