ಕರ್ನಾಟಕ

karnataka

By ETV Bharat Karnataka Team

Published : Feb 6, 2024, 7:58 PM IST

ETV Bharat / bharat

10 ವರ್ಷಗಳ ಅಭಿವೃದ್ಧಿ ಆಡಳಿತ, ಮುದ್ರಾ ಯೋಜನೆಯ ಸಾಫಲ್ಯದ ವಿಡಿಯೋ ಹಂಚಿಕೊಂಡ ಬಿಜೆಪಿ

ಉದ್ಯೋಗಕ್ಕಾಗಿ ಸಾಲ ನೀಡುವ ಮುದ್ರಾ ಯೋಜನೆಯ ಯಶಸ್ಸಿನ ಬಗ್ಗೆ ವಿವರಿಸುವ ವಿಡಿಯೋವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇದನ್ನು 8 ಭಾಷೆಗಳಲ್ಲಿ ರೂಪಿಸಲಾಗಿದೆ.

ಮುದ್ರಾ ಯೋಜನೆಯ ವಿಡಿಯೋ
ಮುದ್ರಾ ಯೋಜನೆಯ ವಿಡಿಯೋ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಮತ್ತು ಬಹುಮಹತ್ವದ ಮುದ್ರಾ ಯೋಜನೆಯ ಸಾಫಲ್ಯದ ಬಗ್ಗೆ ಬಿಜೆಪಿ ಕಿರುಚಿತ್ರ ಬಿಡುಗಡೆ ಮಾಡಿದೆ. ಕನ್ನಡ, ತಮಿಳು, ಹಿಂದಿ ಸೇರಿದಂತೆ 8 ಭಾಷೆಗಳಲ್ಲಿ ಇದನ್ನು ತಯಾರಿಸಲಾಗಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರದ ಭಾಗವಾಗಿ ಚಿತ್ರಿಸಲಾಗಿರುವ ಈ ವಿಡಿಯೋ, ಸರ್ಕಾರದ ಯೋಜನೆಗಳ ಯಶಸ್ಸನ್ನು ಸಾರುತ್ತದೆ. ತಮಿಳು, ತೆಲುಗು, ಮಲಯಾಳಂ, ಕನ್ನಡ, ಅಸ್ಸಾಮಿ, ಒಡಿಯಾ, ಬೆಂಗಾಲಿ ಮತ್ತು ಹಿಂದಿ ಭಾಷೆಯಲ್ಲಿದೆ. ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಆಧರಿತ ಕಿರುಚಿತ್ರ ಬಿಜೆಪಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜನೆಗಳ ಸಾಫಲ್ಯವನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಎಂಟು ಭಾಷೆಗಳಲ್ಲಿ ಒಟ್ಟು 5 ಕಿರುಚಿತ್ರಗಳನ್ನು ರೂಪಿಸಲಾಗಿದೆ. ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೋಟ್ಯಂತರ ಭಾರತೀಯರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಹೇಗೆ ಸಾಕಾರಗೊಳಿಸಿದ್ದಾರೆ ಎಂಬುದನ್ನು ನಿರೂಪಿಸಲಾಗಿದೆ. ವಿಡಿಯೋ ಸಂದೇಶದಲ್ಲಿ ಹಿಂದಿನ ಪೀಳಿಗೆ, ಇಂದಿನ ಪೀಳಿಗೆ ಮತ್ತು ಭವಿಷ್ಯದ ಪೀಳಿಗೆಯನ್ನು ಗುರಿಯಾಗಿಟ್ಟುಕೊಂಡು ಮೋದಿಯವರ ಗ್ಯಾರಂಟಿಗಳನ್ನು ಪ್ರಸ್ತುತಪಡಿಸುತ್ತವೆ.

ಮುದ್ರಾ ಯೋಜನೆ, ಜನ್ ಧನ್ ಯೋಜನೆ, ಉಜ್ವಲಾ ಯೋಜನೆ, ಯುಪಿಐ ಡಿಜಿಟಲ್ ಯೋಜನೆ, ಸಾರ್ವಜನಿಕ ಮೂಲಸೌಕರ್ಯ ಮತ್ತು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಬಗ್ಗೆಯೂ ವಿಡಿಯೋ ಮಾಡಲಾಗಿದೆ. ಅದರಲ್ಲಿ ಮೊದಲ ವಿಡಿಯೋ, ಮುದ್ರಾ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತದೆ.

ವಿಡಿಯೋದಲ್ಲಿ ಏನಿದೆ?:ಯೋಜನೆಯಡಿ 44 ಕೋಟಿಗೂ ಹೆಚ್ಚು ಸಾಲ ನೀಡಲಾಗಿದೆ. ಇದರಿಂದ ಕೋಟ್ಯಂತರ ಜನರು ಉದ್ಯಮಿಗಳಾಗಿ ಮಾರ್ಪಟ್ಟಿದ್ದಾರೆ. ಅದರಲ್ಲಿ ಶೇಕಡಾ 70ರಷ್ಟು ಮಹಿಳೆಯರೇ ಫಲಾನುಭವಿಗಳಾಗಿದ್ದಾರೆ. ಜೊತೆಗೆ ಅವರು ಉದ್ಯೋಗ ಸೃಷ್ಟಿಕರ್ತರೂ ಆಗಿದ್ದಾರೆ. ಇದು ಮೋದಿಯವರ ಗ್ಯಾರಂಟಿಯ ಫಲ ಎಂದು ಪ್ರಚಾರ ಮಾಡಲಾಗಿದೆ. 52 ಸೆಕೆಂಡಿನ ಈ ವಿಡಿಯೋ 'ಜನರು ಕನಸನ್ನಲ್ಲ, ವಾಸ್ತವ ನೋಡುತ್ತಾರೆ. ಆದ್ದರಿಂದಲೇ ಎಲ್ಲರೂ ಮೋದಿಯವರನ್ನು ಆಯ್ಕೆ ಮಾಡುತ್ತಾರೆ' ಎಂಬುವ ಮೂಲಕ ಮುಕ್ತಾಯವಾಗುತ್ತದೆ.

ಪ್ರಧಾನಿ ಮೋದಿ ಅವರು ವರ್ಷಗಳಲ್ಲ, ದಶಕಗಳಲ್ಲ ಮತ್ತು 500 ವರ್ಷಗಳ ದೂರದ ಕನಸನ್ನು ಕಂಡಿದ್ದಾರೆ. ಇದನ್ನು ಸಾಕಾರ ಮಾಡುವ ಗುರಿಯನ್ನೂ ಹಾಕಿಕೊಳ್ಳಲಾಗಿದೆ ಎಂದು ಪ್ರಚಾರ ಗೀತೆಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಬಿಜೆಪಿ ಹೇಳಿದೆ. ವಿಡಿಯೋಗೆ ನೀಡಿರುವ "Tabhi Toh Sab Modi Ko Chunte Hain" ಎಂಬ ಹ್ಯಾಶ್‌ಟ್ಯಾಗ್ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದೆ.

ಯೋಜನೆ ತೃಪ್ತಿ ತಂದಿದೆ-ಪ್ರಧಾನಿ:ಕಿರುಚಿತ್ರವನ್ನು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, "ಉದ್ಯಮಶೀಲತೆಯನ್ನು ಉತ್ತೇಜಿಸಿದ ಮುದ್ರಾ ಯೋಜನೆಯು ಕೋಟ್ಯಂತರ ಜನರ ಜೀವನದಲ್ಲಿ ಮಹತ್ತರ ಬದಲಾವಣೆ ತಂದಿದೆ. ಈ ಯೋಜನೆಯಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳ ಮಹಿಳೆಯರು ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಾಗಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಂಡಿರುವುದು ನನಗೆ ತೃಪ್ತಿ ತಂದಿದೆ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಇಂಧನ ವಲಯದಲ್ಲಿ ಮುಂದಿನ ಐದಾರು ವರ್ಷಗಳಲ್ಲಿ $67 ಬಿಲಿಯನ್​ ಹೂಡಿಕೆ ನಿರೀಕ್ಷೆ: ಮೋದಿ

ABOUT THE AUTHOR

...view details