ಹೈದರಾಬಾದ್:ಬಿಜೆಪಿ ಲೋಕಸಭಾ ಅಭ್ಯರ್ಥಿ, ನಟಿ ಕಂಗನಾ ರಣಾವತ್ ಕುರಿತು ಕಾಂಗ್ರೆಸ್ ನಾಯಕಿ ಹಂಚಿಕೊಂಡಿರುವ 'ಅವಹೇಳನಕಾರಿ' ಪೋಸ್ಟ್ ವಿವಾದ ಸೃಷ್ಟಿಸಿದೆ. ಇದರ ಬೆನ್ನಲ್ಲೇ ಕೈ ಪಕ್ಷದ ನಾಯಕಿ ಸ್ಪಷ್ಟನೆ ನೀಡಿದ್ದು, ನನ್ನ ಅಕೌಂಟ್ನಿಂದ ಬೇರೊಬ್ಬರು ಇದನ್ನು ಪೋಸ್ಟ್ ಮಾಡಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗಕ್ಕೆ ರಾಷ್ಟ್ರೀಯ ಮಹಿಳಾ ಆಯೋಗ ಆದೇಶಿಸಿದೆ.
ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇಟ್ ಅವರ ಎಕ್ಸ್ ಖಾತೆಯಲ್ಲಿ ಕಂಗನಾ ಅವರ ಚಿತ್ರವೊಂದನ್ನು ಹಂಚಿಕೊಂಡು, ಆಕ್ಷೇಪಾರ್ಹ ಅಡಿಬರಹ ನೀಡಲಾಗಿತ್ತು. ಇದು ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಪೋಸ್ಟ್ ಅಳಿಸಿ ಹಾಕಿದ್ದಾರೆ.
ಕಂಗನಾ ತಿರುಗೇಟು:ಕಾಂಗ್ರೆಸ್ ನಾಯಕಿಯ ವಿವಾದಾತ್ಮಕ ಪೋಸ್ಟ್ಗೆ ತಿರುಗೇಟು ನೀಡಿರುವ ನಟಿ ಕಂಗನಾ, "ನನ್ನ 20 ವರ್ಷಗಳ ಸಿನಿಮಾ ವೃತ್ತಿಜೀವನದಲ್ಲಿ ಎಲ್ಲ ಪಾತ್ರಗಳನ್ನು ಮಾಡಿದ್ದೇನೆ. ಮಹಾರಾಣಿ ಪಾತ್ರದಿಂದ ಹಿಡಿದು ಲೈಂಗಿಕ ಕಾರ್ಯಕರ್ತೆಯಾಗಿಯೂ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇನೆ. ಅವರವರ ವೃತ್ತಿಯಲ್ಲಿ ಗೌರವ ಹೊಂದಿದ್ದೇವೆ. ಮಹಿಳೆಯರ ಬಗ್ಗೆ ಸಮಾಜದಲ್ಲಿನ ಅಭಿಪ್ರಾಯವನ್ನು ಬದಲಿಸಬೇಕು ಎಂಬುದು ನನ್ನ ಉದ್ದೇಶ. ಎಲ್ಲ ಮಹಿಳೆಯರೂ ಗೌರವಕ್ಕೆ ಅರ್ಹರು" ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಕಾಂಗ್ರೆಸ್ ನಾಯಕಿ ಹೇಳೋದೇನು?:ವಿವಾದ ಉಂಟಾದ ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿರುವ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನೇಟ್, ನನ್ನ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬಳಸುವ ವ್ಯಕ್ತಿಯೊಬ್ಬರು ಈ ರೀತಿಯ ಕೀಳು ಅಭಿರುಚಿಯ ಪೋಸ್ಟ್ ಮಾಡಿದ್ದಾರೆ. ತಮ್ಮನ್ನು ಕೆಟ್ಟದಾಗಿ ಬಿಂಬಿಸಲು ನನ್ನ ಖಾತೆಯನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ ವಿಡಿಯೋ ಬಿಡುಗಡೆ ಮಾಡಿದ್ದಾರೆ.