ಕರ್ನಾಟಕ

karnataka

ETV Bharat / bharat

ಲೋಕಸಭೆ ಚುನಾವಣೆ: ಟಿಕೆಟ್​ ಘೋಷಿಸಿದ ಒಂದೇ ದಿನಕ್ಕೆ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್​

ಪಶ್ಚಿಮ ಬಂಗಾಳದ ಭೋಜ್‌ಪುರಿ ನಟ, ಅಸನ್ಸೋಲ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್​ ಲೋಕಸಭೆ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

BJP Asansol candidate Pawan Singh
ಬಿಜೆಪಿ ಅಭ್ಯರ್ಥಿ ಪವನ್ ಸಿಂಗ್​

By PTI

Published : Mar 3, 2024, 5:41 PM IST

ನವದೆಹಲಿ/ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಸನ್ಸೋಲ್ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಭೋಜ್‌ಪುರಿ ನಟ ಪವನ್ ಸಿಂಗ್​ ಸ್ಪರ್ಧೆಯಿಂದ ಸರಿದಿದ್ದಾರೆ. ಶನಿವಾರವಷ್ಟೇ ಬಿಜೆಪಿ ಹೈಕಮಾಂಡ್​ ಅಸನ್ಸೋಲ್ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನಾಗಿ ಪವನ್ ಸಿಂಗ್​ ಹೆಸರು ಘೋಷಣೆ ಮಾಡಿತ್ತು. ಆದರೆ, ಒಂದೇ ದಿನದಲ್ಲೇ ಅವರು ಅಸನ್ಸೋಲ್‌ನಿಂದ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

ಪ್ರಸ್ತುತ ತೃಣಮೂಲ ಕಾಂಗ್ರೆಸ್‌ ಸಂಸದ, ನಟ ಶತ್ರುಘ್ನ ಸಿನ್ಹಾ ಅಸನ್ಸೋಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಗೆ ಬಿಜೆಪಿ ಭೋಜ್‌ಪುರಿ ಗಾಯಕ, ನಟ ಪವನ್ ಸಿಂಗ್​​ ಅವರಿಗೆ ಟಿಕೆಟ್​ ಪ್ರಕಟಿಸಿತ್ತು. ಭಾನುವಾರ ಪವನ್ ಸಿಂಗ್​ ತಾವು ಸ್ಪರ್ಧೆ ಮಾಡಲ್ಲ ಎಂದು ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಚುನಾವಣಾ ಪ್ರಚಾರ ಆರಂಭಕ್ಕೂ ಮುನ್ನವೇ ಬಿಜೆಪಿ ಸ್ಥಾನವನ್ನು ಬಿಟ್ಟುಕೊಟ್ಟಿದೆ ಎನ್ನುವ ಮೂಲಕ ಟಿಎಂಸಿ ಬಿಜೆಪಿಯನ್ನು ಲೇವಡಿ ಮಾಡಿದೆ.

ಪವನ್ ಸಿಂಗ್ ಪೋಸ್ಟ್‌:ಚುನಾವಣಾ ಕಣದಿಂದ ಹಿಂದೆ ಸರಿದ ಬಗ್ಗೆ ಪವನ್ ಸಿಂಗ್​​ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ''ಭಾರತೀಯ ಜನತಾ ಪಕ್ಷದ ಉನ್ನತ ನಾಯಕತ್ವಕ್ಕೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪಕ್ಷವು ನನ್ನನ್ನು ನಂಬಿ ಅಸನ್ಸೋಲ್‌ನ ಅಭ್ಯರ್ಥಿ ಎಂದು ಘೋಷಿಸಿದೆ. ಆದರೆ, ಕೆಲವು ಕಾರಣಗಳಿಂದ ನಾನು ಅಸನ್ಸೋಲ್‌ನಿಂದ ಚುನಾವಣೆಗೆ ಸ್ಪರ್ಧಿಸಲು ಸಾಧ್ಯವಾಗುವುದಿಲ್ಲ'' ಎಂದು ಅವರು ಬರೆದುಕೊಂಡಿದ್ದಾರೆ. ಆದರೆ, ಚುನಾವಣೆಗೆ ಸ್ಪರ್ಧಿಸದ ನಿರ್ಧಾರದ ಹಿಂದಿನ ನಿರ್ದಿಷ್ಟ ಕಾರಣವನ್ನು ಅವರು ಬಹಿರಂಗ ಪಡಿಸಿಲ್ಲ.

ಮತ್ತೊಂದೆಡೆ, ಪವನ್ ಸಿಂಗ್ ಅವರಿಗೆ ಟಿಕೆಟ್​ ಘೋಷಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಆಡಳಿತಾರೂಢ ಟಿಎಂಸಿ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿತ್ತು. ಪವನ್ ಸಿಂಗ್ ನಟಿಸಿ ಚಿತ್ರದ ಹಾಡುಗಳಲ್ಲಿ ಮಹಿಳೆಯರನ್ನು ಅಸಭ್ಯವಾಗಿ ಚಿತ್ರಿಸಲಾಗಿದೆ. ಪಶ್ಚಿಮ ಬಂಗಾಳದ ಮಹಿಳೆಯರ ಅವಹೇಳನ ಮಾಡಲಾಗಿದೆ ಎಂದು ಆರೋಪ ಮಾಡಿತ್ತು. ಬಿಜೆಪಿಯವರು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರೆ. ಆದರೆ, ವಾಸ್ತವದಲ್ಲಿ ಬಿಜೆಪಿಯವರು ಮಹಿಳಾ ವಿರೋಧಿಗಳು ಎಂದು ಟಿಎಂಸಿ ನಾಯಕ ಸಂತಾನು ಸೇನ್ ವಾಗ್ದಾಳಿ ಮಾಡಿದ್ದರು.

ಈಗ ಬಿಜೆಪಿ ಟಿಕೆಟ್​ನಿಂದ ಪವನ್ ಸಿಂಗ್ ಸ್ಪರ್ಧೆಗೆ ನಿರಾಕರಿಸಿದ ಬಳಿಕ ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ''ಪಶ್ಚಿಮ ಬಂಗಾಳದ ಜನರ ಕೆಚ್ಚು ಮತ್ತು ಶಕ್ತಿ'' ಎಂದು ಎಕ್ಸ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಇದೇ ವೇಳೆ, ಅಸನ್ಸೋಲ್ ಹಾಲಿ ಸಂಸದರಾದ ಶತ್ರುಘ್ನ ಸಿನ್ಹಾ ಪ್ರತಿಕ್ರಿಯಿಸಿ, ''ಪವನ್ ಸಿಂಗ್​ ಸ್ಪರ್ಧೆ ಮಾಡುವುದು ಅಥವಾ ಸ್ಪರ್ಧಿಸದಿರುವುದು ಅವರ ಪಕ್ಷದ ಆಂತರಿಕ ವಿಷಯ'' ಎಂದಿದ್ದಾರೆ. ಶತ್ರುಘ್ನ ಸಿನ್ಹಾ ಹಲವು ವರ್ಷಗಳಿಂದ ಬಿಜೆಪಿಯಲ್ಲಿದ್ದರು. 2019ರ ಚುನಾವಣೆ ಸಮಯದಲ್ಲಿ ಅವರು ಟಿಎಂಸಿ ಸೇರಿ ಗೆದ್ದಿದ್ದರು.

ಇದನ್ನೂ ಓದಿ:'ನನ್ನ ಕ್ಲಿನಿಕ್ ಕಾಯುತ್ತಿದೆ': ಬಿಜೆಪಿ ಟಿಕೆಟ್​ ನಿರಾಕರಣೆ ಬೆನ್ನಲ್ಲೇ ರಾಜಕೀಯಕ್ಕೆ ಡಾ. ಹರ್ಷವರ್ಧನ್ ನಿವೃತ್ತಿ ಘೋಷಣೆ

ABOUT THE AUTHOR

...view details