ಭುವನೇಶ್ವರ(ಒಡಿಶಾ):ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ಗೇಟ್ಸ್ ಅವರು ಇಂದು ಭುವನೇಶ್ವರದ ಕೊಳೆಗೇರಿ ಪ್ರದೇಶಕ್ಕೆ ಭೇಟಿ ನೀಡಿದ್ದು, ಅಲ್ಲಿ ವಾಸಿಸುವ ಜನರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮಾ ಮಂಗಳ ಬಸ್ತಿಯಲ್ಲಿರುವ ಬಿಜು ಆದರ್ಶ ಕಾಲೊನಿಗೆ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ತೆರಳಿದ ಅವರು, ಜನರ ಯೋಗಕ್ಷೇಮ ವಿಚಾರಿಸಿದರು. ಅಲ್ಲಿನ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರೊಂದಿಗೆ ಸಂವಾದ ನಡೆಸಿದರು. ಮೂಲಸೌಕರ್ಯಗಳ ಕುರಿತು ಹಾಗೂ ಸರ್ಕಾರದ 'ಜಗ ಮಿಷನ್' ಬಗ್ಗೆಯೂ ಮಾಹಿತಿ ಪಡೆದರು.
ರಾಜ್ಯ ಅಭಿವೃದ್ಧಿ ಆಯುಕ್ತೆ ಅನು ಗಾರ್ಗ್ ಅವರು ಸ್ಲಂ ನಿವಾಸಿಗಳಿಗೆ ಒದಗಿಸಿರುವ ಭೂಮಿಯ ಹಕ್ಕು, ನಲ್ಲಿ ನೀರಿನ ವ್ಯವಸ್ಥೆ, ನೈರ್ಮಲ್ಯ ಸೌಲಭ್ಯ ಹಾಗೂ ವಿದ್ಯುತ್ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳ ಬಗ್ಗೆ ವಿವರ ನೀಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅನು ಗಾರ್ಗ್, "ಕೊಳೆಗೇರಿ ನಿವಾಸಿಗಳಿಗೆ ಭೂಮಿಯ ಹಕ್ಕು, ನಲ್ಲಿ ನೀರಿನ ಸಂಪರ್ಕ, ಶೌಚಾಲಯ, ವಿದ್ಯುತ್ ವ್ಯವಸ್ಥೆ ಕಲ್ಪಿಸಿರುವ ಬಗ್ಗೆ ಬಿಲ್ ಗೇಟ್ಸ್ ಅವರಿಗೆ ವಿವರಿಸಿದೆವು. ಕೊಳಚೆ ಪ್ರದೇಶವನ್ನು ಮಾದರಿ ಕಾಲೊನಿಯಾಗಿ ಪರಿವರ್ತಿಸಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು" ಎಂದರು.
ರಾಜ್ಯ ನಗರಾಭಿವೃದ್ಧಿ ಕಾರ್ಯದರ್ಶಿ ಜಿ.ಮತಿ ವತನನ್ ಮಾತನಾಡುತ್ತಾ, "ಬಿಲ್ ಗೇಟ್ಸ್ ಅವರು ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಫಲಾನಭವಿಗಳ ಜೊತೆಗೆ ಮಾತನಾಡಿದರು. ಸರ್ಕಾರದ ಯೋಜನೆಗಳಿಂದ ಅವರ ಜೀವನಶೈಲಿಯಲ್ಲಿ ಆಗಿರುವ ಬದಲಾವಣೆಗಳ ಬಗ್ಗೆ ವಿಚಾರಿಸಿದರು" ಎಂದು ತಿಳಿಸಿದರು.