ಬಿಲಾಸ್‌ಪುರ(ಛತ್ತೀಸ್‌ಗಢ):ಪತಿಯೊಬ್ಬ ತನ್ನ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದಾನೆ. ಆತನೊಂದಿಗೆ ದೈಹಿಕ ಸಂಬಂಧ ಹೊಂದಲು ಪತ್ನಿ ನಿರಾಕರಿಸಿದಾಗ ಈ ಕೃತ್ಯವೆಸಗಿದ್ದಾನೆ. ಅಚ್ಚರಿಯ ಸಂಗತಿ ಎಂದರೆ ಪೊಲೀಸರಿಗೆ ಅನುಮಾನ ಬರಬಾರದೆಂದು ಸ್ವತಃ ತಾವೇ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾನೆ. ಆರಂಭದಲ್ಲಿ ಪೊಲೀಸರಿಗೂ ಶಂಕೆ ವ್ಯಕ್ತವಾಗಿತ್ತು. ಆದರೆ ಪೋಸ್ಟ್‌ಮಾರ್ಟಂ ವರದಿ ಬಂದ ನಂತರ ಕೊಲೆಯ ರಹಸ್ಯ ಬಯಲಾಗಿತ್ತು. ಆರೋಪಿ ಪತಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡು ಬಂಧಿಸಿದ್ದಾರೆ. ಮಾಹಿತಿಯ ಪ್ರಕಾರ, ಈ ಸಂಪೂರ್ಣ ಘಟನೆ ಬಿಲಾಸ್‌ಪುರ ರತನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭೋಂಡ್ಲಾಪಾರಾದಲ್ಲಿ ನಡೆದಿದೆ.
ಫೆಬ್ರವರಿ 10 ರ ತಡರಾತ್ರಿ 11:30ರ ಸುಮಾರಿಗೆ 39 ವರ್ಷ ವಯಸ್ಸಿನ ರೂಪಚಂದ್ ಪಟೇಲ್ ಎಂಬಾತ ಪೊಲೀಸ್ ಠಾಣೆಗೆ ತೆರಳಿದ್ದ. ಅಲ್ಲಿ, ತನ್ನ ಹೆಂಡತಿ ಸವನಿ ಬಾಯಿ (38 ವರ್ಷ) ತೋಟದ ಬಳಿ ಬಿದ್ದಿದ್ದಳು. ಕೂಡಲೇ ನಾನು ಆಕೆಯನ್ನು ರತನ್‌ಪುರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದೆ. ಅಲ್ಲಿ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಪಟೇಲ್ ದೂರು ದಾಖಲಿಸಿದ್ದ.
ಪಟೇಲ್ ದೂರು ದಾಖಲಿಸಿದ ಹಿನ್ನೆಲೆ ರತನ್‌ಪುರ ಪೊಲೀಸರು ತನಿಖೆ ಕೈಗೊಂಡರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮಹಿಳೆಯ ಮರಣೋತ್ತರ ಪರೀಕ್ಷೆ ವರದಿ ಬಂದಾಗ ಪೊಲೀಸರೇ ಬೆಚ್ಚಿಬಿದ್ದರು. ಕಾರಣ ಈ ವರದಿಯಲ್ಲಿ ಮಹಿಳೆಯನ್ನು ಕೊಲೆ ಮಾಡಲಾಗಿದೆ ಅನ್ನುವ ವಿಷಯ ತಿಳಿದುಬಂದಿದೆ. ಮಹಿಳೆಯನ್ನು ಯಾರೋ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆ ಮೂಲಕ ತಿಳಿದುಬಂದಿದೆ.
ಪೊಲೀಸರ ಬಂಧನದಲ್ಲಿ ಆರೋಪಿ ಪತಿ:ಮರಣೋತ್ತರ ಪರೀಕ್ಷೆ ಬಳಿಕ ಪೊಲೀಸರು ತಲೆಕೆಡಿಸಿಕೊಂಡಿದ್ದರು. ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದರು. ಫೆಬ್ರವರಿ 16 ರಿಂದ ಈ ವಿಷಯವನ್ನು ಗಂಭೀರವಾಗಿ ತನಿಖೆ ಮಾಡಲು ಪ್ರಾರಂಭಿಸಿದರು. ಹಲವರ ಹೇಳಿಕೆ ಪಡೆದ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದರು. ಮೊದಲಿಗೆ ಪತಿ ಪೊಲೀಸರನ್ನು ಗೊಂದಲಕ್ಕೀಡು ಮಾಡಲು ಪ್ರಯತ್ನಿಸಿದ. ಆದರೆ ಪೊಲೀಸರು ಆರೋಪಿಯೊಂದಿಗೆ ಕಟ್ಟುನಿಟ್ಟಾಗಿ ವರ್ತಿಸಿದಾಗ ಸತ್ಯ ಹೊರಬಿದ್ದಿದೆ. ಆರೋಪಿ ಪಟೇಲ್ ತನ್ನ ಪತ್ನಿಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡನು.
ದೈಹಿಕ ಸಂಬಂಧ ನಿರಾಕರಿಸಿದ್ದಕ್ಕೆ ಕೊಲೆ:ನಾನು ಕುಡಿತದ ದಾಸ. ಆ ದಿನದಂದು ಸಹ ನಾನು ಮದ್ಯ ಕುಡಿದಿದ್ದೆ. ನಾನು ನನ್ನ ಹೆಂಡತಿಗೆ ದೈಹಿಕ ಸಂಬಂಧ ಹೊಂದುವಂತೆ ಕೇಳಿದೆ. ಆದರೆ, ಪತ್ನಿ ಇದಕ್ಕೆ ನಿರಾಕರಿಸಿದ್ದಳು. ಬಳಿಕ ನಮ್ಮಿಬ್ಬರ ಮಧ್ಯೆ ಜಗಳ ನಡೆಯಿತು. ಆ ಜಗಳ ವಿಕೋಪಕ್ಕೆ ತಿರುಗಿದಾಗ ನಾನು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದೆ ಎಂದು ಆರೋಪಿ ಪೊಲೀಸರ ಮುಂದೆ ಹೇಳಿದ್ದಾರೆ. ಆರೋಪಿ ತಪ್ಪೊಪ್ಪಿಕೊಂಡ ನಂತರ ಪೊಲೀಸರು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.
ಶಾರೀರಿಕ ಸಂಬಂಧಕ್ಕೆ ನಿರಾಕರಿಸಿದಾಗ ಪತಿ ಕುಡಿದ ಅಮಲಿನಲ್ಲಿ ಪತ್ನಿಯನ್ನು ಕೊಂದಿದ್ದಾನೆ. ಸೆಕ್ಷನ್ 302ರ ಅಡಿಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ರತನ್‌ಪುರ ಪೊಲೀಸ್ ಠಾಣೆ ಪ್ರಭಾರಿ ದೇವೇಶ್ ಸಿಂಗ್ ರಾಥೋಡ್ ಹೇಳಿದರು.
ಓದಿ:ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ; 9 ಮಂದಿ ಸಾವು