ಬೇಗುಸರಾಯ್, ಬಿಹಾರ: ಪ್ರೇಮ ವಿವಾಹವು ಯುವತಿಯನ್ನು ಮಾತ್ರವಲ್ಲದೆ ಆಕೆಯ ತಂದೆ ಮತ್ತು ಸಹೋದರನನ್ನು ಬಲಿ ಪಡೆದಿದೆ. ತಂದೆ, ಮಗ ಮತ್ತು ಮಗಳು ಗಂಡನ ಮನೆಗೆ ಹೋದಾಗ ಅವರ ಮಾವ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೃತರನ್ನು ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣೆ ವ್ಯಾಪ್ತಿಯ ರಘುನಾಥಪುರ ಶ್ರೀನಗರ ನಿವಾಸಿಗಳಾದ 60 ವರ್ಷದ ಉಮೇಶ್ ಯಾದವ್, 25 ವರ್ಷದ ರಾಜೇಶ್ ಯಾದವ್ ಮತ್ತು ಮಗಳು 21 ವರ್ಷದ ನೀಲು ಕುಮಾರಿ ಎಂದು ಗುರುತಿಸಲಾಗಿದೆ. ಘಟನೆ ಬೆಳಕಿಗೆ ಬಂದ ನಂತರ ಬೇಗುಸರಾಯ್ ಎಸ್ಪಿ ಮನೀಶ್, ಡಿಎಸ್ಪಿ ಬಿನಯ್ ಕುಮಾರ್ ರೈ, ಠಾಣಾ ಪ್ರಭಾರಿ ದೀಪಕ್ ಕುಮಾರ್ ಸೇರಿದಂತೆ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಆರೋಪಿಗಳು ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಏನಿದು ಪ್ರಕರಣ: ಹುಡುಗಿ ಮತ್ತು ಹುಡುಗ ಪರಸ್ಪರ ಪ್ರೀತಿಸುತ್ತಿದ್ದರು. ಸುಮಾರು ಎರಡು ವರ್ಷಗಳ ಹಿಂದೆ ಇವರಿಬ್ಬರು ಸಂಬಂಧಿಕರ ಕೈಗೆ ಸಿಕ್ಕಿಬಿದ್ದಿದ್ದರು. ಆಗ ಇಬ್ಬರ ಒಪ್ಪಿಗೆ ಮೇರೆಗೆ ದೇವಸ್ಥಾನದಲ್ಲಿ ಮದುವೆ ಮಾಡಲಾಗಿತ್ತು. ಆದರೆ ನಂತರ ಯುವಕನ ಕುಟುಂಬಸ್ಥರು ಯುವತಿಯನ್ನು ಮನೆ ತುಂಬಿಸಿಕೊಳ್ಳಲು ನಿರಾಕರಿಸಿದರು. ಕಳೆದ ಎರಡು ವರ್ಷಗಳಿಂದ ನಡೆಯುತ್ತಿದ್ದ ಈ ವಿವಾದ ಕೊನೆಗೂ ರಕ್ತಸಿಕ್ತ ಸಂಘರ್ಷಕ್ಕೆ ತಿರುಗಿತು.
ನಮ್ಮ ಸಹೋದರಿಯದು ಪ್ರೇಮ ವಿವಾಹವಾಗಿತ್ತು. ಆದ್ರೆ ನಮ್ಮ ಸಹೋದರಿಯನ್ನು ಮನೆ ತುಂಬಿಸಿಕೊಳ್ಳಲು ಒಪ್ಪದ ಗಂಡನ ಮನೆಯ ಕುಟುಂಬಸ್ಥರು 15 ಲಕ್ಷ ರೂಪಾಯಿ ವರದಕ್ಷಿಣೆ ನೀಡುವಂತೆ ಒತ್ತಡವಿತ್ತು. ಅದೇ ರೀತಿ ನಾವು ಹೇಗೋ 15 ಲಕ್ಷ ರೂಪಾಯಿ ಹೊಂದಿಸಿ ನೀಡಲು ನಿರ್ಧರಿಸಿದ್ದೇವು. ಸಹೋದರಿಯನ್ನು ಮನೆ ತುಂಬಿಸಿಕೊಳ್ಳುವಂತೆ ಮನವಿ ಮಾಡಲು ಹಣದ ಸಮೇತ ತಂದೆ, ಇನ್ನೊಬ್ಬ ಸಹೋದರ ತೆರಳಿದ್ದಾಗ ಮೂವರ ಮೇಲೆ ಗಂಡಿನ ತಂದೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥ ಬಿಪಿನ್ ಯಾದವ್ ಆರೋಪಿಸಿದ್ದಾರೆ.
ನಮ್ಮ ಸಹೋದರಿಗೆ ತನ್ನ ಗಂಡನೊಂದಿಗೆ ಬಾಳಬೇಕೆಂಬ ಆಸೆಯಿತ್ತು. ಆದ್ರೆ ಅದು ಈಡೇರಲಿಲ್ಲ. ಈ ಕೊಲೆ ಪ್ರಕರಣದಲ್ಲಿ ನಮ್ಮ ಸಹೋದರಿಯ ಮಾವ ಮತ್ತು ಆಕೆಯ ಪತಿ ಸೇರಿದಂತೆ ಕುಟುಂಬದ ಇತರ ಸದಸ್ಯರು ಭಾಗಿಯಾಗಿದ್ದಾರೆ. ಘಟನೆಯ ಬಳಿಕ ಎಲ್ಲರೂ ಮನೆಯಿಂದ ಓಡಿ ಹೋಗಿದ್ದಾರೆ ಎಂದು ಬಿಪಿನ್ ಹೇಳಿದರು.
ಈ ಬಗ್ಗೆ ಎಸ್ಪಿ ಮನೀಶ್ ಪ್ರತಿಕ್ರಿಯಿಸಿ, ಸ್ಥಳದಿಂದ ಮೂರು ಮೃತದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಮೃತ ಮಹಿಳೆಗೆ ಸುಮಾರು ಎರಡು ವರ್ಷದ ಹಿಂದೆ ವಿವಾಹವಾಗಿತ್ತು, ಸೊಸೆಯನ್ನು ಗಂಡನ ಕುಟುಂಬಸ್ಥರು ಒಪ್ಪಿಕೊಳ್ಳದ ಕಾರಣ ಮೂವರು ಇಲ್ಲಿಗೆ ಬಂದಿದ್ದರು. ಮೂವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇನ್ನೂ ಒಬ್ಬರು ಗಾಯಗೊಂಡಿರುವ ಬಗ್ಗೆ ಮಾಹಿತಿ ಲಭಿಸಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಹಲವು ಮಾತುಗಳು ಕೇಳಿ ಬಂದಿವೆ. ಅದರಲ್ಲಿ ಒಂದು ಹುಡುಗಿಯ ಜೊತೆ ಹುಡುಗನ ಬಲವಂತದ ಮದುವೆ ಆಗಿದೆಯಂತೆ. ಪ್ರಸ್ತುತ, ಪೊಲೀಸರು ಮೂವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಾಹೇಬಪುರ ಕಮಲ್ ಪೊಲೀಸ್ ಠಾಣೆ ಎಸ್‌ಎಚ್‌ಒ ದೀಪಕ್ ಕುಮಾರ್, ಶನಿವಾರ ಸಂಜೆ ಉಮೇಶ್ ಯಾದವ್ ತನ್ನ ಮಗ ಮತ್ತು ಮಗಳು ನೀಲು ಕುಮಾರಿ ಜೊತೆ ಆಕೆಯ ಗಂಡನ ಮನೆಗೆ ಹೋದಾಗ ಈ ಘಟನೆ ನಡೆದಿದೆ. ಪ್ರಾಥಮಿಕ ತನಿಖೆ ಪ್ರಕಾರ, ಗೃಹಿಣಿಯ ತಂದೆಯನ್ನು ನೋಡುತ್ತಿದ್ದಂತೆ ಗಂಡಿನ ಕುಟುಂಬಸ್ಥರು ಕೋಪಗೊಂಡು ಜಗಳಕ್ಕೆ ಮುಂದಾದರು. ನೀಲು ಕುಮಾರಿ ಅವರ ಮಾವ ಇದ್ದಕ್ಕಿದ್ದಂತೆ ತಮ್ಮ ಬಂದೂಕನ್ನು ತೆಗೆದುಕೊಂಡು ಮೂವರನ್ನು ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಹೊಡೆದರು. ಪರಿಣಾಮ ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗೆ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ಎಸ್‌ಎಚ್‌ಒ ಹೇಳಿದರು.
ಓದಿ:ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಭಾರಿ ಸ್ಫೋಟ ; 10 ಮಂದಿ ಸಾವು