ಪಾಟ್ನಾ (ಬಿಹಾರ) :ಬಿಹಾರ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ಶುರುವಾಗಿವೆ. ಆರ್‌ಜೆಡಿ ಮತ್ತು ಜೆಡಿಯು ಮೈತ್ರಿಯಲ್ಲಿ ಬಿರುಕು ಕಾಣಿಸಿಕೊಂಡ ಲಕ್ಷಣಗಳು ಗೋಚರಿಸುತ್ತಿವೆ. ಸಿಎಂ ನಿತೀಶ್ಕುಮಾರ್ ಇಂದು ಜೆಡಿಯು ನಾಯಕರ ತುರ್ತು ಸಭೆ ನಡೆಸಿದ್ದರೆ, ಬಿಜೆಪಿ ನಾಯಕರು ದೆಹಲಿಗೆ ದೌಡಾಯಿಸಿದ್ದಾರೆ. ಎಲ್ಲದರ ಮಧ್ಯೆ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ಮಾಡಿರುವ ಎಕ್ಸ್ ಪೋಸ್ಟ್ ತೀವ್ರ ವಿವಾದಕ್ಕೆ ಕಾರಣವಾಗಿದೆ.
ತುರ್ತು ಸಭೆ ಕರೆದ ಸಿಎಂ ನಿತೀಶ್:ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ಹಿರಿಯ ನಾಯಕರೊಂದಿಗೆ ಇಂದು ತುರ್ತು ಸಭೆ ನಡೆಸಿದ್ದಾರೆ. ಸಿಎಂ ಸೇರಿದಂತೆ ಪಕ್ಷದ ರಾಜ್ಯಾಧ್ಯಕ್ಷ ಉಮೇಶ್ ಕುಶ್ವಾಹ, ಹಣಕಾಸು ಸಚಿವ ವಿಜಯ್ ಕುಮಾರ್ ಚೌಧರಿ, ಜಲಸಂಪನ್ಮೂಲ ಸಚಿವ ಸಂಜಯ್ ಝಾ ಮತ್ತು ಮಾಜಿ ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಅವರು ಮುಖ್ಯಮಂತ್ರಿ ನಿವಾಸದಲ್ಲಿ ಸಭೆ ನಡೆಸಿದ್ದಾರೆ.
ಸುದೀರ್ಘ ಸಭೆಯ ಬಳಿಕ ಜೆಡಿಯು ನಾಯಕರು ಹೊರ ಬಂದಾಗ, ವಿತ್ತ ಸಚಿವ ವಿಜಯ್ ಚೌಧರಿ ಅವರು ಮಾಧ್ಯಮಗಳ ಜತೆ ಮಾತನಾಡಿ, ಸಭೆ ನಡೆಸುವುದು ಪಕ್ಷಗಳ ಕೆಲಸ. ನಳಂದಾದಲ್ಲಿ ನಾಳೆ ಗಣರಾಜ್ಯೋತ್ಸವ ಧ್ವಜಾರೋಹಣ ಮಾಡಲಿದ್ದೇವೆ ಎಂದು ಹೇಳಿದರು. ರಾಜಕೀಯ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದಾಗ ಮುಗುಳ್ನಕ್ಕು ಹೊರಟರು. ಸಿಎಂ ನಿವಾಸ ಸೇರಿದಂತೆ ಸಚಿವರ ನಿವಾಸಗಳಿಗೆ ಭದ್ರತೆ ಹೆಚ್ಚಿಸಿದ್ದು, ಕುತೂಹಲದ ಗೂಡಾಗಿದೆ.
ಲಾಲು ನಿವಾಸದಲ್ಲೂ ಚಟುವಟಿಕೆ:ಬದಲಾಗುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರು ಕೂಡ ತಮ್ಮ ನಿವಾಸದಲ್ಲಿ ಮುಖಂಡರ ಸಭೆ ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರು ರಾಬ್ರಿ ನಿವಾಸಕ್ಕೆ ಆಗಮಿಸಿದ್ದರು. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ, ಯಾವುದೇ ಸಭೆ ನಡೆದಿಲ್ಲ. ಲಾಲು ಯಾದವ್ ಪ್ರತಿ ದಿನ ಕಾರ್ಯಕರ್ತರನ್ನು ಭೇಟಿಯಾಗುತ್ತಾರೆ. ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. ಸರ್ಕಾರದ ಜೊತೆಗೆ ಆರ್‌ಜೆಡಿ ಬೆಂಬಲವಾಗಿ ನಿಂತಿದೆ. ಬಿಜೆಪಿ ಇಲ್ಲದ ವದಂತಿ ಹಬ್ಬಿಸುತ್ತಿದೆ ಎಂದು ಆರ್‌ಜೆಡಿ ನಾಯಕ ಶಕ್ತಿ ಯಾದವ್ ಅವರು ಹೇಳಿದರು.