ಕರ್ನಾಟಕ

karnataka

ಬಿಹಾರದ ಮಹಾಘಟಬಂಧನ್​ನಲ್ಲಿ ಒಡಕು?: ಸಸ್ಪೆನ್ಸ್ ಮುಂದುವರಿಸಿದ ಸಿಎಂ ನಿತೀಶ್ ಕುಮಾರ್

By ETV Bharat Karnataka Team

Published : Jan 26, 2024, 5:02 PM IST

ವಂಶಪಾರಂಪರ್ಯ ರಾಜಕಾರಣದ ಬಗ್ಗೆ ನಿತೀಶ್ ಕುಮಾರ್ ಅವರ ಹೇಳಿಕೆ ಕಾಂಗ್ರೆಸ್ ಮತ್ತು ಆರ್​ಜೆಡಿಯನ್ನು ಗುರಿಯಾಗಿಸಿಕೊಂಡಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇಂತಹ ಪರಿಸ್ಥಿತಿಯಲ್ಲಿ ಮಹಾಘಟಬಂಧನ್ ಸರ್ಕಾರ ಅಸ್ಥಿತ್ವದಲ್ಲಿರುವುದಿಲ್ಲ ಎಂದು ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಹೇಳಿದ್ದಾರೆ.

Etv Bharat
Etv Bharat

ಪಾಟ್ನಾ : ಬಿಹಾರದಲ್ಲಿ ನಡೆಯುತ್ತಿರುವ ರಾಜಕೀಯ ಗೊಂದಲದ ನಡುವೆ ನಿತೀಶ್ ಕುಮಾರ್ ಅವರ ಮುಂದಿನ ಹೆಜ್ಜೆಯತ್ತ ಎಲ್ಲರ ಕಣ್ಣು ನೆಟ್ಟಿದೆ. ಅವರು ಇಂದು ರಾಜ್ಯಪಾಲರನ್ನು ಭೇಟಿಯಾಗಿ ಆರ್​ಜೆಡಿ ಮತ್ತು ಕಾಂಗ್ರೆಸ್​ಗೆ ನೀಡಿದ್ದ ಬೆಂಬಲವನ್ನು ಹಿಂತೆಗೆದುಕೊಂಡು ಎನ್​ಡಿಎಗೆ ಸೇರುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಮತ್ತೊಂದೆಡೆ, ಭಾನುವಾರ ಮತ್ತೊಮ್ಮೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ, ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರ ಅಸ್ಥಿತ್ವದಲ್ಲಿರುವುದಿಲ್ಲ ಎಂಬ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ಅವರ ಹೇಳಿಕೆ ಈಗ ಸಂಚಲನ ಸೃಷ್ಟಿಸಿದೆ.

ಹಿಂದೂಸ್ತಾನ್ ಅವಾಮ್ ಮೋರ್ಚಾದ ನೇತೃತ್ವ ವಹಿಸಿರುವ ಮಾಜಿ ಸಿಎಂ ಜಿತನ್ ರಾಮ್ ಮಾಝಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, "ಬಿಹಾರದ ರಾಜಕೀಯ ವಾತಾವರಣದ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. ನೀವೆಲ್ಲರೂ ಅದನ್ನು ನೋಡುತ್ತಿದ್ದೀರಿ. ವಂಶಪಾರಂಪರ್ಯ ರಾಜಕಾರಣದ ಬಗ್ಗೆ ನಿತೀಶ್ ಕುಮಾರ್ ಅವರ ಹೇಳಿಕೆ ಕಾಂಗ್ರೆಸ್ ಮತ್ತು ಆರ್​ಜೆಡಿಯನ್ನು ಗುರಿಯಾಗಿಸಿಕೊಂಡಿದೆ. ಈ ಪರಿಸ್ಥಿತಿಯಲ್ಲಿ ಅವರು ಒಗ್ಗಟ್ಟಾಗಿ ಉಳಿಯುತ್ತಾರೆ ಎಂದು ನೀವು ಭಾವಿಸುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮೊದಲು, ಜೆಡಿಯು ಹಿರಿಯ ಮುಖಂಡ ಕೆ ಸಿ ತ್ಯಾಗಿ ಮಾತನಾಡಿ, "ಲಾಲು ಪ್ರಸಾದ್ ನೇತೃತ್ವದ ಮಿತ್ರ ಪಕ್ಷ ಆರ್​ಜೆಡಿಯನ್ನು ಗುರಿಯಾಗಿಸಿಕೊಂಡು ನಿತೀಶ್ ಕುಮಾರ್ ಅವರು ವಂಶಪಾರಂಪರ್ಯ ರಾಜಕೀಯದ ಬಗ್ಗೆ ಹೇಳಿಕೆ ನೀಡಿಲ್ಲ. ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನವನ್ನು ನೀಡಿದ್ದಕ್ಕಾಗಿ ನಿತೀಶ್ ಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ವ್ಯಕ್ತಪಡಿಸಿರುವುದು "ಪ್ರಶಂಸೆ " (ಹೊಗಳಿಕೆ) ಅಲ್ಲ" ಎಂದು ಹೇಳಿದ್ದಾರೆ.

ಆರ್​ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಸಾಮಾಜಿಕ ಮಾಧ್ಯದ ಎಕ್ಸ್ ಮಾಡಿರುವ ಪೋಸ್ಟ್​ಗಳು ಚರ್ಚೆಗೆ ಗ್ರಾಸವಾಗಿವೆ. ಸದ್ಯ ಅವರು ಅಳಿಸಿ ಹಾಕಿರುವ ಎಕ್ಸ್​ ಪೋಸ್ಟ್​ಗಳ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಅದರಲ್ಲಿ ಅವರು " ಸೈದ್ಧಾಂತಿಕವಾಗಿ ಅಲೆದಾಡುತ್ತಿರುವ ಒಬ್ಬರು ಸಮಾಜವಾದದ ಚಾಂಪಿಯನ್ ಎಂದು ಹೇಳಿಕೊಳ್ಳುತ್ತಾರೆ" ಎಂದು ಸಿಎಂ ನಿತೀಶ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಆದರೆ, ಅಳಿಸಲಾಗಿರುವ ಈ ಪೋಸ್ಟ್​ಗಳು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡಿವೆಯೇ ಹೊರತು ನಿತೀಶ್ ಕುಮಾರ್ ಅವರನ್ನು ಅಲ್ಲ ಎಂದು ಆರ್​ಜೆಡಿ ಸ್ಪಷ್ಟಪಡಿಸಿದೆ.

ಇದೆಲ್ಲದರ ಮಧ್ಯೆ, ಸುಶೀಲ್ ಕುಮಾರ್ ಮೋದಿ ಬಿಹಾರದ ಉಪಮುಖ್ಯಮಂತ್ರಿಯಾಗಿ ಮರಳುವ ಸಾಧ್ಯತೆಯಿದೆ ಮತ್ತು ಜಿತಮ್ ರಾಮ್ ಮಾಂಝಿ ಮೇಲೆ ಆರ್​ಜೆಡಿ ಕಣ್ಣಿರಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಬಿಜೆಪಿ ಕೂಡ ಮಾಂಝಿ ಅವರೊಂದಿಗೆ ಸಂಪರ್ಕದಲ್ಲಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಬಿಹಾರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಆರ್​ಜೆಡಿ- ಜೆಡಿಯು ಸಭೆ, ವಿವಾದ ಸೃಷ್ಟಿಸಿದ ಲಾಲು ಪುತ್ರಿ

ABOUT THE AUTHOR

...view details