ಪಾಟ್ನಾ(ಬಿಹಾರ):ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ವಿಧಾನಸಭೆಯಲ್ಲಿಂದು ವಿಶ್ವಾಸ ಮತ ಗೆದ್ದುಕೊಂಡಿತು. ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಪಕ್ಷಗಳು ಸದನದಿಂದ ವಾಕ್ಔಟ್ ನಡೆಸಿದವು. ಇದರಿಂದಾಗಿ ನೂತನ ಸರ್ಕಾರ 129-0 ಅಂತರದ ಮತಗಳಿಂದ ಬಹುಮತ ಸಾಬೀತು ಮಾಡಿತು.
ನಿರೀಕ್ಷಿತ ಬಹುಮತ ಹೊಂದಿದ್ದ ಸಿಎಂ ನಿತೀಶ್ ಕುಮಾರ್, ವಿಪಕ್ಷಗಳ ಆರೋಪಗಳಿಗೆ ಪ್ರತಿದಾಳಿ ನಡೆಸಿದರು. ಇದೇ ವೇಳೆ ಬಿಜೆಪಿಯ ಇಬ್ಬರು ಡಿಸಿಎಂಗಳು ಆರ್ಜೆಡಿಯನ್ನು ಗೂಂಡಾ ಸರ್ಕಾರಕ್ಕೆ ಹೋಲಿಸಿದರು. ದೀರ್ಘ ಚರ್ಚೆಯ ಬಳಿಕ ಸ್ಪೀಕರ್ ಮತ ಪ್ರಕ್ರಿಯೆ ನಡೆಸಿದಾಗ ಆರ್ಜೆಡಿ, ಕಾಂಗ್ರೆಸ್, ಎಡಪಕ್ಷಗಳು ಸರ್ಕಾರದ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿ ಸದನದಿಂದ ಹೊರನಡೆದವು. ಇದರಿಂದ ಬಿಜೆಪಿ 78, ಜೆಡಿಯು 45, ಎಚ್ಎಎಂ 4 ಹಾಗು ಇತರ ಇಬ್ಬರು ಶಾಸಕರು ಸೇರಿ 129 ಮತಗಳು ನಿತೀಶ್ಕುಮಾರ್ ಸರ್ಕಾರದ ಪರ ಬಿದ್ದವು.
243 ಸದಸ್ಯ ಬಲದ ವಿಧಾನಸಭೆಯಲ್ಲಿ ಬಹುಮತಕ್ಕಾಗಿ 122 ಸದಸ್ಯರ ಮತಗಳು ಬೇಕಾಗಿದ್ದವು. ವಿಪಕ್ಷಗಳ ಬಹಿಷ್ಕಾರದಿಂದಾಗಿ ನಿತೀಶ್ ಬೆಂಬಲಿತ ಬಿಜೆಪಿ, ಎಚ್ಎಎಂ, ಇತರರು ಸೇರಿ 129 ಶಾಸಕರು ನಿತೀಶ್ ಸರ್ಕಾರಕ್ಕೆ ಬೆಂಬಲ ಸೂಚಿಸಿದರು.
ಆರ್ಜೆಡಿಯಿಂದ ಭ್ರಷ್ಟ ಆಡಳಿತ:ವಿಶ್ವಾಸಮತ ಯಾಚನೆ ಚರ್ಚೆಯ ವೇಳೆ ಆರ್ಜೆಡಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ನಿತೀಶ್ ಕುಮಾರ್, ರಾಜ್ಯದಲ್ಲಿ ಆರ್ಜೆಡಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಅಂದಿನ ಎಲ್ಲ ಪ್ರಕರಣಗಳನ್ನು ತನಿಖೆಗೆ ಒಳಪಡಿಸಲಾಗುವುದು. ಹಲವಾರು ಕೋಮುಗಲಭೆಗಳೂ ನಡೆದಿವೆ ಎಂದರು.