ಪಾಟ್ನಾ (ಬಿಹಾರ):ನೀಟ್-ಯುಜಿ ಪರೀಕ್ಷೆ ಪ್ರಶ್ನೆಪತ್ರಿಕೆ ಬಿಹಾರದ ಕೆಲವೆಡೆ ಸೋರಿಕೆಯಾಗಿ ಭಾರೀ ವಿರೋಧಕ್ಕೆ ಕಾರಣವಾಗಿತ್ತು. ಈ ಟೀಕೆಯ ಬೆನ್ನಲ್ಲೇ, ಅಲ್ಲಿನ ಸರ್ಕಾರ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಮಸೂದೆಯನ್ನು ಅಂಗೀಕರಿಸಿದೆ. ಬುಧವಾರ ಮಸೂದೆಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಧ್ವನಿಮತದ ಮೂಲಕ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಇದನ್ನು ವಿಪಕ್ಷಗಳು ವಿರೋಧಿಸಿ ಸಭಾತ್ಯಾಗ ಮಾಡಿವೆ.
ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಕುಮಾರ್ ಚೌಧರಿ ಅವರು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆಗಟ್ಟುವಿಕೆ) ಮಸೂದೆ-2024 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದರು. ಆದರೆ, ಇದಕ್ಕೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿದವು. ಇದರ ನಡುವೆಯೂ ಸಿಎಂ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಮಸೂದೆಯನ್ನು ಧ್ವನಿಮತಕ್ಕೆ ಹಾಕಿ ಅಂಗೀಕಾರ ಪಡೆದುಕೊಂಡಿತು.
ಮಸೂದೆಯಲ್ಲೇನಿದೆ?:ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ತೊಡಗಿಕೊಂಡ ಆರೋಪಿಗಳಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆ ಮತ್ತು ಕನಿಷ್ಠ 1 ಕೋಟಿ ರೂಪಾಯಿ ದಂಡವನ್ನು ವಿಧಿಸಲು ಮಸೂದೆಯಲ್ಲಿ ಅವಕಾಶ ನೀಡಿದೆ. ಕಠಿಣ ನಿಯಮಗಳಿಂದ ರಾಜ್ಯದಲ್ಲಿ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸೋರಿಕೆಯಾಗದಂತೆ ತಡೆಯುವುದು ಇದರ ಉದ್ದೇಶವಾಗಿದೆ.
ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡ ಸಚಿವ ಚೌಧರಿ, "ಪರೀಕ್ಷೆಯಲ್ಲಿ ನಡೆಯುವ ಅಕ್ರಮಗಳ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂಬುದನ್ನ ಸದನಕ್ಕೆ ತಿಳಿಸಲಾಗಿತ್ತು. ಇದೀಗ ನೀಟ್ ಕೇಸ್ ತನಿಖೆಯ ಹಂತದಲ್ಲಿದೆ. ಪಬ್ಲಿಕ್ ಪರೀಕ್ಷೆಗಳಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಪುನಃಸ್ಥಾಪಿಸುವ ಅವಶ್ಯಕತೆಯಿದೆ. ಅಪರಾಧಿಗಳ ವಿರುದ್ಧ ಕಠಿಣ ಕಾನೂನು ಕ್ರಮವಾಗಲು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗಿದೆ ಎಂದರು.