ನವದೆಹಲಿ/ಪಾಟ್ನಾ:ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಸಿಲ ತಾಪ ವಿಪರೀತವಾಗಿದೆ. ಮಕ್ಕಳು ಶಾಲೆಗೆ ತೆರಳಲೂ ಕಷ್ಟವಾದರೆ, ಜನರು ಸಾರ್ವಜನಿಕವಾಗಿ ಹೊರಬರಲೂ ಹೆದರುವಂತಾಗಿದೆ. ಬಿಹಾರದಲ್ಲಿ ಬಿಸಿಲ ಝಳಕ್ಕೆ 100 ಮಕ್ಕಳು ಶಾಲೆಯಲ್ಲೇ ಕುಸಿದು ಬಿದ್ದಿದ್ದಾರೆ. ಹಲವು ಪೊಲೀಸರು ಕೂಡ ನಿತ್ರಾಣಗೊಂಡ ಘಟನೆ ನಡೆದಿದೆ. ಇತ್ತ ದೆಹಲಿಯಲ್ಲಿ ಇದೇ ಮೊದಲ ಬಾರಿಗೆ 52 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಬಿಹಾರದಲ್ಲಿ ಬಿಸಿಲು ತೀವ್ರವಾಗಿದೆ. ಕೆಲವೆಡೆ 48 ಡಿಗ್ರಿ ಸೆಲ್ಸಿಯಸ್ಗೂ ಹೆಚ್ಚಿದೆ. ಬಿಸಿಲಿನ ತಾಪ ವಿಪರೀತವಾಗಿದ್ದರೂ, ಶಾಲೆಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿಲ್ಲ. ಇದರಿಂದಾಗಿ ಬುಧವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಶಾಲೆಯ ಮಕ್ಕಳು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಪೊಲೀಸರು, ಶಿಕ್ಷಕರ ಆರೋಗ್ಯದಲ್ಲೂ ವ್ಯತ್ಯಯ ಕಂಡುಬಂದಿದೆ. ಶಿಕ್ಷಣ ಇಲಾಖೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಜನರಲ್ಲಿ ಆಕ್ರೋಶ ಉಂಟು ಮಾಡಿದೆ.
ಇಲ್ಲಿನ ಬೇಗುಸರಾಯ್, ಜಮುಯಿ, ನಳಂದಾ, ಶೇಖ್‌ಪುರ, ಮೋತಿಹಾರಿ, ಮುಂಗೇರ್, ಬಂಕಾ, ಶಿವರ್ ಜಿಲ್ಲೆಗಳ 100ಕ್ಕೂ ಹೆಚ್ಚು ಮಕ್ಕಳು ಬಿಸಿಲಿನ ತಾಪಕ್ಕೆ ಶಾಲೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಕೂಡಲೇ ಎಲ್ಲರನ್ನೂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರ ಆರೋಗ್ಯ ಸುಧಾರಿಸಿದೆ ಎಂದು ತಿಳಿದುಬಂದಿದೆ.
ರಾಷ್ಟ್ರ ರಾಜಧಾನಿಯಲ್ಲಿ ಬೆಂಕಿ ಬಿಸಿಲು:ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಣಬಿಸಿಲಿಗೆ ಜನರು ತತ್ತರಿಸಿದ್ದಾರೆ. ಬುಧವಾರ ಇಲ್ಲಿನ ಮುಂಗೇಶ್‌ಪುರ ಪ್ರದೇಶದಲ್ಲಿ ತಾಪಮಾನವು 52.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಇಲ್ಲಿಯವರೆಗಿನ ಗರಿಷ್ಠ ತಾಪಮಾನವಾಗಿದೆ. ಇದಕ್ಕೂ ಮುನ್ನ ಮಂಗಳವಾರ ಇದೇ ಪ್ರದೇಶದಲ್ಲಿ 50 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ನಜಾಫ್‌ಗಢ ಪ್ರದೇಶದಲ್ಲಿ 49.3 ಡಿಗ್ರಿ ಸೆಲ್ಸಿಯಸ್ ತಾಪಮಾನವಿತ್ತು. ನವದೆಹಲಿಯಲ್ಲಿ ತಾಪಮಾನ 44 ಡಿಗ್ರಿ ಸೆಲ್ಸಿಯಸ್ ಇತ್ತು.
ಹವಾಮಾನ ಇಲಾಖೆಯ ಪ್ರಾದೇಶಿಕ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ, ರಾಜಸ್ಥಾನದಿಂದ ಬೀಸುವ ಬಿಸಿಗಾಳಿಯಿಂದ ನಗರದ ಹೊರವಲಯದಲ್ಲಿ ಭಾರೀ ಉಷ್ಣ ಉಂಟು ಮಾಡಿದೆ. ದೆಹಲಿಯ ಕೆಲವು ಭಾಗಗಳು ಈ ಶಾಖದ ಅಲೆಗಳಿಗೆ ತುತ್ತಾಗಿವೆ. ಮುಂಗೇಶ್‌ಪುರ, ನರೇಲಾ ಮತ್ತು ನಜಾಫ್‌ಗಢ್‌ನಂತಹ ಪ್ರದೇಶಗಳಲ್ಲಿ ಅತಿಯಾದ ಉಷ್ಣಾಂಶ ದಾಖಲಾಗುತ್ತಿದೆ ಎಂದು ತಿಳಿಸಿದರು.
ಸಂಜೆ ತುಂತುರು ಮಳೆ:ನಿರಂತರವಾಗಿ ಏರುತ್ತಿರುವ ತಾಪಮಾನದ ನಡುವೆ ಬುಧವಾರ ಸಂಜೆ ರಾಜ್ಯದ ಕೆಲವೆಡೆ ತುಂತುರು ಮಳೆಯಾಗಿದೆ. ಇದರಿಂದ ಭೂಮಿಯ ಉಷ್ಣ ತುಸು ಇಳಿಕೆಯಾಗಿದ್ದು, ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಮೇ 31 ರವರೆಗೆ ಶಾಖದ ಅಲೆಯು ಮುಂದುವರಿಯುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ:ರಾಜಸ್ಥಾನದಲ್ಲಿ ರಣಭಯಂಕರ ಬಿಸಿಲು: ಬಾರ್ಮೆರ್ನಲ್ಲಿ 46.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು; ಹೊರಬಂದರೆ ಸುಟ್ಟು ಹೋಗುವ ಪರಿಸ್ಥಿತಿ! - Mercury continues to soar