ನವದೆಹಲಿ:ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆ ನಡೆಸುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಕೆಲ ಅಧಿಕಾರಿಗಳನ್ನು ವಜಾ ಮಾಡಲು ಆದೇಶಿಸಿದೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಜೊತೆ ರಾಜಿ ಮಾಡಿಕೊಂಡ ಆರೋಪದ ಮೇಲೆ ಅಲ್ಲಿನ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ರಾಜೀವ್ ಕುಮಾರ್ ಅವರನ್ನು ಸೋಮವಾರ ವಜಾಗೊಳಿಸಲಾಗಿದೆ.
ಇದಲ್ಲದೇ, ಚುನಾವಣೆಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲು ಗುಜರಾತ್, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ 6 ರಾಜ್ಯಗಳಲ್ಲಿ ಗೃಹ ಕಾರ್ಯದರ್ಶಿಗಳನ್ನೂ ಚುನಾವಣಾ ಕೆಲಸಗಳಿಂದ ದೂರವಿಡಲು ಆಯೋಗ ಆಯಾ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಇಂದು (ಸೋಮವಾರ) ಸಂಜೆಯೊಳಗೆ ಕ್ರಮ ಕೈಗೊಂಡು ವರದಿ ನೀಡುವಂತೆಯೂ ತಾಕೀತು ಮಾಡಿದೆ.
ಮಹಾರಾಷ್ಟ್ರದಲ್ಲಿ ಕಮಿಷನರ್ಗಳ ಎತ್ತಂಗಡಿ:ಒಂದೇ ಸ್ಥಳದಲ್ಲಿ ಮೂರು ವರ್ಷ ಅಧಿಕಾರ ಪೂರೈಸಿರುವ ಅಥವಾ ಆ ಅಧಿಕಾರಿಗಳು ತವರು ಜಿಲ್ಲೆಯವರೇ ಆದಲ್ಲಿ, ಅಂತಹ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆಯೂ ಆಯೋಗ ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ಜೊತೆಗೆ ಮಹಾರಾಷ್ಟ್ರದ ಕೆಲವು ಮುನ್ಸಿಪಲ್ ಕಮಿಷನರ್‌ಗಳು ಮತ್ತು ಕೆಲವು ಹೆಚ್ಚುವರಿ/ ಉಪ ಮುನ್ಸಿಪಲ್ ಕಮಿಷನರ್‌ಗಳನ್ನು ಎತ್ತಂಗಡಿ ಮಾಡುವಂತೆಯೂ ಸೂಚಿಸಲಾಗಿದೆ.
ಈ ಹಿಂದಿನ ಆದೇಶವನ್ನು ಪಾಲಿಸದ ಕಾರಣ ಅಸಮಾಧಾನ ವ್ಯಕ್ತಪಡಿಸಿರುವ ಆಯೋಗ, ಇಂದು ಸಂಜೆ 6 ಗಂಟೆಯೊಳಗೆ ವರ್ಗಾವಣೆ ಮಾಡಿದ ವರದಿಯನ್ನು ನೀಡಬೇಕು ಎಂದು ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ.