ಆಂಧ್ರಪ್ರದೇಶ: ವಿಪರೀತ ಮಳೆಗೆ ಭದ್ರಾಚಲಂ ಪಟ್ಟಣ ಜಲಾವೃತಗೊಂಡಿದೆ. ಬುಧವಾರ ಮುಂಜಾನೆಯಿಂದ 6.8 ಸೆಂ.ಮೀ ಮಳೆಯಾಗಿದೆ. ಇಲ್ಲಿನ ಚರಂಡಿಗಳು ತುಂಬಿ ಹರಿಯುತ್ತಿವೆ.
ಸೀತಾರಾಮಚಂದ್ರಸ್ವಾಮಿ ದೇಗುಲದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೂಲಕ ಭಕ್ತರಿಗೆ ಸಂಚರಿಸಲು ಸಾಧ್ಯವಾಗದಷ್ಟು ನೀರು ತುಂಬಿದೆ. ಆ ಭಾಗದಲ್ಲಿ ಸೊಂಟ ಮಟ್ಟ ನೀರು ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ. ಅನ್ನದಾನ ಛತ್ರಕ್ಕೆ ಎರಡೂ ಕಡೆಯಿಂದ ನೀರು ಪ್ರವೇಶಿಸಿದೆ.
ಜಲಾವೃತಗೊಂಡ ಸೀತಾರಾಮಚಂದ್ರಸ್ವಾಮಿ ದೇವಾಲಯ (ETV Bharat) ವಿಸ್ಟಾ ಕಾಂಪ್ಲೆಕ್ಸ್ನಲ್ಲಿ ದೊಡ್ಡ ಕೊಳ ನಿರ್ಮಾಣವಾಗಿದ್ದು ಆ ಕಡೆಯಿಂದಲೂ ಭಕ್ತರಿಗೆ ಪ್ರವೇಶವಿಲ್ಲದಂತಾಗಿದೆ. ನ್ಯೂ ಕಾಲೊನಿ ಭಾಗದಲ್ಲೂ ಇದೇ ಪರಿಸ್ಥಿತಿ. ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯರು ಚಿಂತೆಗೊಳಗಾಗಿದ್ದಾರೆ.
ವಿಸ್ಟಾ ಕಾಂಪ್ಲೆಕ್ಸ್ ಮತ್ತು ನ್ಯೂ ಕಾಲೊನಿಯ ಮೋರಿಗಳನ್ನು ತೆರೆದು ಮೋಟರ್‌ಗಳ ಮೂಲಕ ನೀರು ಗೋದಾವರಿಗೆ ನೀರು ಹರಿಸಲಾಗಿದೆ. ಇದರಿಂದ ರಾಮಾಯಲ ಪರಿಸರ ಮತ್ತು ನ್ಯೂ ಕಾಲೊನಿಯಲ್ಲಿ ಪ್ರವಾಹ ಸಮಸ್ಯೆ ತಗ್ಗಿದೆ. ಸೀತಾರಾಮಚಂದ್ರಸ್ವಾಮಿ ದೇವಸ್ಥಾನದ ಬಳಿಯ ದಿಬ್ಬದ ಮೇಲಿದ್ದ 100 ವರ್ಷ ಹಳೆಯ ಕಟ್ಟಡ ಒದ್ದೆಯಾಗಿದ್ದು, ಕುಸುಮಾ ಹರನಾಥ ಬಾಬಾ ದೇವಸ್ಥಾನದ ಕಲ್ಯಾಣ ಮಂಟಪದ ಕೆಳಭಾಗದಲ್ಲಿ ಮಣ್ಣು ಕುಸಿದಿದೆ. ಹಾಳಾದ ಮಂಟಪದ ಅಡಿಗಲ್ಲುಗಳು ಯಾವ ಕ್ಷಣದಲ್ಲಾದರೂ ಬೀಳುವ ಆತಂಕವಿದೆ.
ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿರುವ ಆರ್‌ಡಿಒ ದಾಮೋದರ ರಾವ್, ತಹಶೀಲ್ದಾರ್ ಶ್ರೀನಿವಾಸ್, ಇಒ ಸುದರ್ಶನ್, ಜಿಲ್ಲಾಧಿಕಾರಿ ಜಿತೇಶ್ ವಿ.ಪಾಟೀಲ್ ಅವರ ಗಮನಕ್ಕೆ ತಂದಿದ್ದಾರೆ. ಹಾನಿಗೀಡಾದ ಮಂಟಪವನ್ನು ಪರಿಶೀಲಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅವರು ಆದೇಶಿಸಿದ್ದಾರೆ. ಐಟಿಸಿ ರಕ್ಷಣಾ ತಂಡ ಸ್ಥಳಕ್ಕಾಗಮಿಸಿ ಕಲ್ಯಾಣ ಮಂಟಪದ ಕೆಳಗೆ ದೇವಸ್ಥಾನದ ಬಳಿ ಇರುವ ಮರಗಳು ಮತ್ತು ಕಂಬಗಳಿಗೆ ಹಗ್ಗಗಳನ್ನು ಕಟ್ಟಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ:ಕೊಚ್ಚಿ ಹೋದ ರುದ್ರಪ್ರಯಾಗದ ಸೋನಪ್ರಯಾಗ ತಾತ್ಕಾಲಿಕ ಸೇತುವೆ - Temporary bridge Washout